ರವಿವಾರ ೮ ನವೆಂಬರ್ ೨೦೦೯

ಎಲ್ಲ ಮರೆತಿರುವಾಗ....

ಹೊರಗೆ ಮುಸಲಧಾರೆಯ ಆರ್ಭಟಕ್ಕೆ ಸುಯ್ಯೆಂದು ಬೀಸುವ ಗಾಳಿ ಸಾಥ್ ನೀಡುತ್ತಿದ್ದರೆ, ಒಳಗೆ ಬೆಚ್ಚಗೆ ಸ್ವೆಟರ್ ಹಾಕಿಕೊಂಡು ಒಂದು ಕೈಯಲ್ಲಿ ಬಿಸಿ ಕಾಫಿಯನ್ನೂ ಇನ್ನೊಂದು ಕೈಯಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳನ್ನೂ" ಹಿಡಿದುಕೊಂಡು ಕುಳಿತಿದ್ದಳು ಪಾವನಿ. ಹಾಗಂತ ಇದೇ ಮೊದಲೇನಲ್ಲ ಆಕೆ ಈ ಕಾದಂಬರಿಯನ್ನು ಓದುತ್ತಿರುವುದು. ಕಳೆದ ನಾಲ್ಕೈದು ವರ್ಷಗಳಲ್ಲಿ ಮೂರು ಸಲ ಓದಿ ಮುಗಿಸಿದ್ದಾಗಿದೆ. ಇದು ನಾಲ್ಕನೆಯ ಬಾರಿ ಅಷ್ಟೇ. ಅದೇನೋ ಎಂತೋ ಮೂಕಜ್ಜಿಯ ಕನವರಿಕೆಗಳು, ವಿಚಿತ್ರ ಕನಸುಗಳು ಹಾಗೂ ಆಕೆಯೊಳಗಿನ ವಿಶೇಷತೆಯಾದ ವಸ್ತು ಸ್ಪರ್ಶ ಮಾತ್ರದಿಂದ ಜನರನ್ನೇ ಅಳೆಯುವ ಪರಿ, ಎಲ್ಲವೂ ಪ್ರತಿ ಸಲ ಓದುವಾಗಲೂ ಅವಳಲ್ಲೊಂದು ವಿನೂತನ ಭಾವವನ್ನು ಭಿತ್ತುತ್ತಿದ್ದವು. ಇವೆಲ್ಲವುಗಳ ಜೊತೆಗೇ ಸದಾ ಆಕೆಯನ್ನು ಕಾಡುತ್ತಿದ್ದುದು ತನ್ನ ಮೂರೂರಜ್ಜಿಯ ನೆನಪುಗಳು. ಎಲ್ಲೋ ಒಂದು ಮೂಲೆಯಲ್ಲಿ ಪಾವನಿ ಮೂರೂರಜ್ಜಿಯನ್ನು ಮೂಕಜ್ಜಿಯೊಂದಿಗೆ ಹೋಲಿಸಿಕೊಂಡು ನೋಡುತ್ತಿದ್ದಳು. ಕ್ರಮೇಣ ಅವಳ ಮನಃಪಟಲದಲ್ಲಿ ಮೂಕಜ್ಜಿಯೇ ಮೂರೂರಜ್ಜಿಯಾಗಿ ಮಾರ್ಪಾಡಾಗುತ್ತಿದ್ದಳು. ಇದಕ್ಕೆ ಮೂಲ ಕಾರಣ ಇಬ್ಬರ ಹೆಸರೂ ಮೂಕಾಂಬಿಕೆಯಾಗಿದ್ದುದೂ ಹೌದು.

ಪಾವನಿಯ ಅಜ್ಜ ಅಂದರೆ ತಾಯಿಯ ತಂದೆಯ ಏಕಮಾತ್ರ ತಂಗಿಯೇ ಈ ಮೂರೂರಜ್ಜಿ. ಅಣ್ಣ ತಂಗಿಯರ ಅನುಬಂಧ, ವಾತ್ಸಲ್ಯವನ್ನು ಸ್ವತಃ ತನ್ನಜ್ಜಿ ಅಂದರೆ ತಾಯಿಯ ತಾಯಿಯ ಮೂಲಕವೇ ಅನೇಕ ಬಾರಿ ಕೇಳಿದ್ದಳು. "ಆಯಿ ನಿಜ ಹೇಳು ನೀನೂ ಮೂರೂರಜ್ಜಿ ಯಾವತ್ತೂ ಠೂ ಬಿಟ್ಟಿದ್ದಿಲ್ಯ? ಜಗ್ಳ ಆಡಿದ್ದಿಲ್ಯ? ಆವಾಗ ಅಜ್ಜ ಯಾರ ಪಕ್ಷ ವಹಿಸ್ತಿದ್ದ? ನಿಂದೋ ತನ್ನ ತಂಗಿದೋ?" ಎಂದು ಪಾವನಿ ಕೆಣಕಲು ಸರಸಮ್ಮ ತನ್ನ ಬೊಚ್ಚು ಬಾಯಿ ತೆಗೆದು ಗೊಳ್ಳೆಂದು ನಕ್ಕಿದ್ದರು. "ಎಂತ ಕೂಸೇ ನಂಗವೆಂತ ನಿಂಗ್ಳ ಈಗಿನ ಆ ಸುಡುಗಾಡು ಧಾರಾಹಿ ತರಹ ಹೇಳಿ ಮಾಡ್ಕಂಜ್ಯ? ಅದು ನನ್ನ ನಾದ್ನಿಗಿಂತ ಹೆಚ್ಚಾಗಿದ್ದು ತಿಳ್ಕ. ಅದೂ ಅಲ್ದೇ ಪಾಪ ಅದ್ರ ಜೀವ್ನವೇ ಒಂದು ಗೋಳಾಟ ಆಗಿರಕಿರೆ ನಾ ಎಂತಕ್ಕೆ ಸುಮ್ನೆ ಜಗ್ಳ ಆಡ್ಲಿ ಹೇಳು? ಆ ಬಡ್ವೆಯಾದ್ರೂ ಎಂತಕ್ಕೇ ಹೇಳಿ ನನ್ನ ಜೊತೆಗೆ ಮಾತಿಗೆ ನಿಲ್ಗು? ಹಾಂಗೆ ನೋಡಿದ್ರೆ ಮೂಕಾಂಬೆ ಹುಟ್ಟಿ, ಬದ್ಕಿದ್ದೇ ಒಂದು ಪವಾಡ.. ಆದ್ರೆ ಅದು ಜೀವನ್ದಲ್ಲಿ ಕಂಡ ದುಃಖ, ಸಂಕ್ಟ ಎಣ್ಸಿದ್ರೆ ಒಂದೊದ್ಸಲ ಅದು ಬದ್ಕಿದ್ದಾದ್ರೂ ಎಂತಕ್ಕನೋ ಕಂಡಿತ್ತು ನನ್ಗೆ ನೋಡು..." ಎಂದು ಹೇಳುತ್ತಾ ಆಕೆಯ ಕಣ್ಣಂಚಿನಲ್ಲಿಣುಕಿದ ವ್ಯಥೆಯ ಬಿಸಿ ಪಾವನಿಯನ್ನೂ ತಾಗಿದಂತಾಗಿತ್ತು.

"ಕೂಸೆ ಮೂಕಾಂಬೆ ಹುಟ್ಟಿದಾಗ ಮಾವ್ನೋರಿಗೆ ರಾಶಿ ಖುಶಿ ಆಗಿತ್ತಡ.. ಹೆರಿಗೆ ರಾಶಿ ಕಷ್ಟ ಆಗಿ ಅತ್ತೇರು ಬದ್ಕಿದ್ದೇ ದೊಡ್ಡದು.... ಹುಟ್ಟು ಒಂದು ದಿವ್ಸ ಕೂಸು ಕುಂಯ್ಯಿ..ಕುಂಯ್ಯಿ.. ಅಂದಿದ್ದು, ಮಾರನೇ ದಿವ್ಸ ಸದ್ದೇ ಇಲ್ಯಡ ನೋಡು. ಆಗೋತು... ಕಥೆ ಮೂಗ್ದೇ ಹೋತು... ಋಣ ಇಷ್ಟೇ ಇದ್ದಿತ್ತು ಇದ್ರಿದ್ದು.. ಹೇಳಿ ಅಂದ್ಕಂಡು ಮಾವ್ನೋರು ನಿನ್ನಜ್ಜ ಎಲ್ಲಾ ಸೇರಿ ಕಣ್ಣೀರ‍ಿಡ್ತಾ ಗುಂಡಿ ತೋಡಿ ಅದ್ನ ಹಾಕಿದ್ದೇ ತಡ ನೋಡು.. ಮತ್ತೆ ಸಣ್ಣಕೆ ಕುಂಯ್ಯಿ ಅಂತಡ. ಇವ್ಕೆ ಒಂದ್ಸಲ ಕೈಕಾಲೇ ಆಡಿದ್ದಿಲ್ಯಡ. ಒಂದು ಚೂರು ಆಚೀಚೆ ಆಗಿದ್ರೆ ಎಂತಾ ಅನಾಹುತ ಆಗ್ತಿತ್ತು ಹೇಳು? ಅದ್ರ ಪ್ರಾಣಾನ ಆ ಯಮರಾಜ ಹಿಂದೇನೆ ಕಳ್ಸುವುಟ ನೋಡು.. ಇಲ್ಲೇ ಅನುಭವಿಸ್ಲಿ ಹೇಳಾದಿಕ್ಕು.. ಹ್ಮಂ.. ಎಲ್ಲಾ ಬ್ರಹ್ಮರಾಯನ ಹಣೆಬರಹ.. ಪಾಪ.. ಸತ್ತೇಹೋತು ಹೇಳಿ ಅಂದ್ಕಂಡಿದ್ದು ಬದಿಕಂಡು ಇವತ್ತಿನವರೆಗೂ ಸಾಯ್ತಾನೇ ಇದ್ದು.." ಎಂದು ಸೆರಗಂಚಿನಿಂದ ಕಣ್ಣೊರೆಸಿಕೊಂಡಿದ್ದಳು ಸರಸಮ್ಮ.

ಆಯಿ ಹೇಳಿದ್ದ ಈ ಕಥೆಯನ್ನು ತನ್ನ ತಾಯಿಯ ಬಾಯಿಯಲ್ಲಿ ಅದೆಷ್ಟೋ ಬಾರಿ ಕೇಳಿ ವಿಸ್ಮಿತಳಾಗಿದ್ದಳು ಪಾವನಿ. ಇನ್ನೇನು ಮಣ್ಣಾಗ ಬೇಕಿದ್ದ ಕೂಸು ಉಸಿರಾಡಿ ಬಾಳಿ ಬದುಕಿದ್ದು ಒಂದು ಅಪೂರ್ವ ಸಂಗತಿ ಎನಿಸಿತ್ತು ಅವಳಿಗೆ. ಪಾವನಿಯ ತಾಯಿ ತನ್ನ ಬಾಲ್ಯವನ್ನೆಲ್ಲಾ ಕಳೆದದ್ದು ಸೋದರತ್ತೆಯ ಮನೆಯಾದ ಮೂರೂರಿನಲ್ಲೇ ಆಗಿತ್ತು. ಹಾಗಾಗಿ ಇನ್ನೂ ಆಕೆಗೆ ಅವಳ ಕಂಡರೆ ವಿಶೇಷ ಮಮತೆ. ಹೆತ್ತ ಮಕ್ಕಳು ಬರಲು ಹಿಂದೆ ಮುಂದೆ ನೋಡಿದರೂ ಅವಳು ಮಾತ್ರ ವರುಷಕ್ಕೆರಡು ಬಾರಿಯಾದರೂ ಪಾವನಿಯ ಕರೆದುಕೊಂಡು ಸೋದರತ್ತೆಯನ್ನು ಕಂಡು ಬರುತ್ತಿದ್ದಳು. ಆದರೂ ಪಾವನಿಗೆ ಕೆಲವೊಂದು ವಿಷಯಗಳ ಸ್ಪಷ್ಟತೆ ಈವರೆಗೂ ಆಗಿರಲಿಲ್ಲ. ಯಾಕೆ ತನ್ನಜ್ಜ, ಮೂರೂರಜ್ಜಿಯನ್ನು ಮುಖ ನೋಡಿ ಮಾತಾಡಿಸೊಲ್ಲ?.. ಯಾಕೆ ಮೂರೂರಜ್ಜಿ ತನ್ನ ಅಣ್ಣಯ್ಯನೆದುರು ಬರಲು ಆದಷ್ಟು ಹಿಂದೇಟು ಹಾಕುತ್ತಾಳೆ? ಅಂಥದ್ದೇನು ನಡೆದಿರಬಹುದು ಎಂದು ಎಷ್ಟೋ ಸಲ ಅಮ್ಮನನ್ನೂ ಕೇಳಿದ್ದಳು. ಆದರೆ ಅಷ್ಟೊಂದು ಸಮರ್ಪಕ ಉತ್ತರವೇನೂ ಆಕೆಗೆ ಸಿಕ್ಕಿರಲಿಲ್ಲ. ತನ್ನತ್ತೆಯ ಗೋಳಿನ ಕಥೆಯನ್ನು ಮತ್ತೆ ಹೇಳಲಿಚ್ಚಿಸದೆಯೋ ಇಲ್ಲಾ ಹಿಂದೆ ನಡೆದ ಕಹಿ ನೆನಪುಗಳನ್ನು ಮತ್ತೆ ಹಸಿರಾಗಿಸಲು ಇಷ್ಟವಾಗದೆಯೋ ಹಾರಿಕೆಯ ಉತ್ತರವನ್ನಷ್ಟೇ ನೀಡಿದ್ದಳು. ಆದರೆ ತನ್ನ ಸಂಶಯಗಳಿಗೆಲ್ಲಾ ಸರಿಯಾದ ಉತ್ತರಗಳನ್ನು ಪಾವನಿ ಮುಂದೊಂದು ದಿನ ತನ್ನ ಆಯಿಯ ಬಳಿಯೇ ಕೇಳಿದಳು. ಸರಸಮ್ಮನ ಸ್ಮೃತಿಪಟಲದಲ್ಲಿ ಆ ಕಹಿ ಘಟನೆ ಎಂದೂ ಮರೆಯಲಾಗದ ಛವಿಯನ್ನೊತ್ತಿತ್ತು. ಹೇಗೆ ತಾನೇ ಆಕೆ ಮರೆತಾರು ತನ್ನ ಪ್ರಿಯ ನಾದಿನಿಯ ಆ ಕರುಣಾಜನಕ ಸ್ಥಿತಿಯನ್ನು.

ಮೂಕಾಂಬಿಕೆ ಹುಟ್ಟಿ ಮರುಜನ್ಮ ಪಡೆದದ್ದೇ ಒಂದು ಪವಾಡವಷ್ಟೇ. ಆದರೆ ಆಕೆಯ ಬದುಕಿನಲ್ಲೇನೂ ಪವಾಡ ನಡೆಯಲೇ ಇಲ್ಲಾ. ಇಲ್ಲೇ ಸ್ವರ್ಗ..ಇಲ್ಲೇ ನರಕ ಎಂಬತೆ ಜೀವ ಪಡೆದದ್ದೇ ಸ್ವರ್ಗ ಉಳಿದದ್ದೆಲ್ಲಾ ನರಕ ಎಂಬಂತಾಗಿತ್ತು ಆಕೆಯ ಬದುಕು ಮುಂದೆ. ನರಸಿಂಹ ಜೋಯಿಸರು ಸರಸಮ್ಮನ ವರಿಸಿ ಗುಬ್ಬಿಮನೆಗೆ ತಂದ ವರುಷದೊಳಗೇ ಮೂಕಾಂಬಿಕೆಯನ್ನೂ ಕನ್ಯಾದಾನ ಮಾಡಿ ಕಳುಹಿಸಿದ್ದರು. ಏಕ ಮಾತ್ರ ತಂಗಿಯ ಮದುವೆಯನ್ನು ಗೊತ್ತುಮಾಡುವ ಮೊದಲು ಯೋಗ್ಯ ವರನಿಗಾಗಿ ಜೋಯಿಸರು ಚೆನ್ನಾಗಿಯೇ ಹುಡುಕಿದ್ದರು. ಅಂತೂ ಕೊನೆಗೆ ಸಿಕ್ಕಿದ್ದು ಕುಮಟಾದಿಂದ ೬-೭ ಕಿ.ಮೀ ದೂರದ ಮೂರೂರಿನ ಶ್ರೀಪತಿ ಹೆಗಡೆ. "ಜೋಯ್ಸ್‌ರೇ ಚಿನ್ನದ ತುಂಡು ಮಾಣಿ.. ಕಣ್ಮುಚ್ಕ ಮದ್ವೆ ಮಾಡ್ಲಕ್ಕು.. ದೊಡ್ಡ ಮಾತೇ ಆಡ್ತ್ನಿಲ್ಲೆ ನೋಡಿ.. ನಿಮ್ಮ ಕೂಸು ಆರಾಮಾಗಿರ್ತು" ಎಂದು ಮೂರೂರು, ಕಲ್ಲಬ್ಬೆಯ ಆಚೀಚೆ ಮನೆಯವರು ಹೇಳಿದ್ದು ಕೇಳಿಯೇ ಜೋಯಿಸರು ಧಾರೆ ಎರೆದು ಕೊಟ್ಟಿದ್ದರು. ಹದಿನಾರರಲ್ಲಿಯೇ ಹಸೆಮಣೆ ಏರಿ ಹೊಸಬದುಕ ಕನಸ ಹೊತ್ತು ಗುಬ್ಬಿಮನೆಯಿಂದ ಮೂರೂರು ಸೇರಿದ ಮೂಕಾಂಬೆಯ ಬಾಳು ಮೂರಾಬಟ್ಟೆ ಆಗಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.

ಊರವರ ಮಾತಿಗೆ ಮರುಳಾಗಿ ಮೋಸ ಹೋಗಿದ್ದ ಮೂಕಾಂಬೆಯ ಅಣ್ಣಯ್ಯ ಹಾಗೂ ತಂದೆಗೆ ಶ್ರೀಪತಿಯ ನಿಜ ಬಣ್ಣ ತಿಳಿಯಲು ತಿಂಗಳೂ ಬೇಕಾಗಲಿಲ್ಲ. ಹದಿನೈದು ದಿನಕ್ಕೊಮ್ಮೆ ಉಕ್ಕೇರುವ ಆತನ ಹುಚ್ಚುತನ ಮೂಕಾಂಬೆಯ ಜೊತೆಗೆ ಅವಳ ತವರನ್ನೂ ಮಂಕಾಗಿಸಿಬಿಟ್ಟಿತು. ತಿಂಗಳಲ್ಲಿ ಹದಿನೈದು ದಿನ ಮಂಕಾಗಿ ಕುಳಿತಿದ್ದು, ತನಗರಿತ ಕೆಲಸ ಕಾರ್ಯ ಮಾಡಿಕೊಂಡಿರುತ್ತಿದ್ದ ಶ್ರೀಪತಿ ತಿಂಗಳು ಕಳೆಯುವುದರೊಳಗೆ ಬುದ್ಧಿಭ್ರಮಣೆಗೊಳಗಾಗಿ ಅಸಂಬದ್ಧವಗಿ ವರ್ತಿಸುತ್ತಿದ್ದ. "ಕೂಸೆ ಎಂತ ಕೇಳ್ತೆ ನೀನು....ಹುಣ್ಣಿಮೆ ಅಮಾವಾಸ್ಯೆಗೆಲ್ಲಾ ಹುಚ್ಚೇರಿ ಸರ ಸರನೆ ತೆಂಗಿನ ಮರ, ಅಡ್ಕೆ ಮರ ಹತ್ತಿ ಬರ ಬರನೆ ಕಾಯೆಲ್ಲಾ ಉದ್ರಿಸಿ ಹಾಕ್ತಿದ್ದ.... ಓಡೋಗಿ ಎಲ್ಲಾ ಅವ್ನ ಎಳ್ಕ ಬರಕಾಗಿತ್ತು. ಆಗಿನ ಕಾಲ್ದಲ್ಲಿ ಸುಟ್ಟ್ ಕುಮ್ಟೇಲೂ ಹುಚ್ಚಿನ ಡಾಕ್ಟ್ರ ಇದ್ದಿದ್ನಿಲ್ಲೆ. ಅದ್ರ ಕಷ್ಟ ನೋಡಲಾಗ್ದೇ ನಂಗವೇ ಎಂಥದೋ ಹಳ್ಳಿ ಔಷ್ದಿನೇ ಮಾಡ್ಸಿ ನೋಡ್ದೋ.. ಆದ್ರೂ ಕಡ್ಮೆ ಆಜಿಲ್ಲೆ...ಹದ್ನೆಂಟು ವರ್ಷಕ್ಕೇ ಮೂಕಾಂಬೆಗೆ ಅರ್ವತ್ತಾದಾಂಗೆ ಅನಿಸ್ತಿತ್ತು. ಚಿಂತೆ ಮಾಡಿ ಮಾಡಿ ಮಾವ್ನೋರು ಹಾಸ್ಗೆ ಹಿಡ್ದಾಗಿತ್ತು ನೋಡು. ಮಧ್ಯೆ ಎರ್ಡು ಪುಟ್ಟ ಗಂಡು ಮಕ್ಕ ಬೇರೆ. ಎಂತ ಮಾಡ್ತೆ ಹೇಳು? ನಿನ್ನಜ್ಜ ಮಾಡ್ದೇ ಹೋದ ಪೂಜೆಯಿಲ್ಲೆ...ಊಹೂಂ ಎಂತೂ ಪ್ರಯೋಜ್ನ ಆಜಿಲ್ಲೆ... ಪಾಪ ಅವ್ನ ಹುಚ್ಚಿಗೋ ಇಲ್ಲ ಮೂಕಾಂಬೆ ವ್ಯಸನಕ್ಕೋ ಕೊನೆ ಹೇಳು ಹಾಂಗೆ ಇಪ್ಪತ್ನಾಲ್ಕು ವರ್ಷಕ್ಕೇ ಮೂಕಾಂಬೆಕೆ ಗಂಡ ಹೇಳಂವ ಇಲ್ಲಗಿದ್ದಾಂಗಾದ..ಇದ್ರ ನರ್ಕಕ್ಕೆ ದೂಡಿ ತಾನು ಸತ್ತು ಸ್ವರ್ಗ ಸೇರ್ದ...ಹ್ಮ್ಂ... ಮೊದ್ಲಾದ್ರೂ ಎನು ಸುಖಾ ಇತ್ತು ಹೇಳಿ ಇದು ದುಃಖ ಪಡವು ಹೇಳು.. ಸ್ವಲ್ಪ ದಿನ ಇಲ್ಲೇ ಇತ್ತು ನಂಗ್ಳ ಜೊತೆಗೆ.. ಎರ್ಡು ಗಂಡುಮಕ್ಕನೂ ಇಲ್ಲೇ ಶಾಲೆಗೆ ಹೋಗ್ತಿದ್ದೋ..." ಎಂದು ಸರಸಮ್ಮ ಕಣ್ಣೀರೊರೆಸಿಕೊಂಡಾಗ ಪಾವನಿಯ ಕಣ್ಣಂಚೂ ಒದ್ದೆಯಾಗಿತ್ತು.

ಗಂಡ ಸತ್ತ ಮರುದಿವಸವೇ ಮೂಕಾಂಬೆ ತವರಿಗೆ ಬಂದಿದ್ದಳು. ಮಗಳ ದುರ್ಗತಿ ಕಂಡು ದೊಡ್ಡ ಜೋಯಿಸರು ಅತೀವ ದುಃಖ ಪಟ್ಟರೂ ಹಳೆಕಾಲದ ಸಂಪ್ರದಾಯ ಮಾತ್ರ ಮರೆಯಲಿಲ್ಲ. ಮೊದಲಿನಿಂದಲೂ ಮೂಕಾಂಬೆಗೆ ತನ್ನ ಮಾರುದ್ದದ ಕೂದಲ ಮೇಲೆ ಅತೀವ ಅಭಿಮಾನ. ಬಿಗಿಯಾಗಿ ಒಂದು ಜಡೆಹಾಕಿದರೆ ಅದು ಕರಿನಾಗರದಷ್ಟು ಉದ್ದವಾಗುತ್ತಿತ್ತು. ಮಿರಮಿರನೆ ಮಿಂಚುವ ಆ ಕೂದಲನ್ನು ಮೊಗ್ಗಿನದಂಡೆಗಳಿಂದ ಅಲಂಕರಿಸುವುದೆಂದರೆ ಅವಳಿಗದೆಂಥದೋ ಸಂತೋಷ. ಆದರೆ ವೈಧವ್ಯ ಅವಳ ಆ ಜಡೆಯ ಸುಖಕ್ಕೂ ಕತ್ತರಿ ಹಾಕಿತ್ತು. "ಅಪ್ಪಯ್ಯ ಬ್ಯಾಡ... ಈಗ ಕಾಲ ಬದ್ಲಾಜು.. ಮೂಕಾಂಬೆಗೆ ಮನಸ್ಸಿಲ್ಲೆ ಅಂದ್ರೆ ಬಿಟ್ಬುಡು.. ಪಾಪ ಬಡವೆ ಮೊದ್ಲೇ ಬೇಜಾರದಲ್ಲಿದ್ದು.. ಕೂದ್ಲೆಲ್ಲಾ ತೆಗ್ಸದು ಬೇಡ.."ಎಂದು ಗೋಗರೆದ ಮಗನ ಮಾತಿಗೂ "ಅತ್ಗೆ ನೀನಾದ್ರೂ ಹೇಳೆ.. ನಾ ಬಳೆ, ಕುಂಕಮ, ಹೂವು ಎಲ್ಲಾ ಬಿಡ್ತಿ ಆದ್ರೆ ಈ ಕೂದ್ಲೊಂದು ತೆಗ್ಸದು ಬ್ಯಾಡ ಹೇಳೆ.. ಕೈ ಮುಗಿತಿ.." ಎಂದು ಗೋಳಾಡಿದ ಮಗಳ ದುಃಖವನ್ನೂ ಮರೆತು.."ಮಾವಯ್ಯ ಯಾರೇನಾರ ಹೇಳ್ಕಳ್ಲಿ..ಎಲ್ಲದಕ್ಕಿಂತ ಮೂಕಾಂಬೆ ದುಃಖ ದೊಡ್ಡದು ಇದೆಲ್ಲಾ ಬೇಡ.." ಎಂದು ಮೊದಲಬಾರಿ ಎದುರು ನಿಂತು ಮಾತಾಡಿದ ಸೊಸೆಯ ಮಾತನ್ನೂ ಮೀರಿ ದೊಡ್ಡ ಜೋಯಿಸರು ಹಠ ಹೊತ್ತು ಆ ಸುಂದರ ಕೇಶರಾಶಿಯನ್ನು ಹೊಳೆಪಾಲು ಮಾಡಿಬಿಟ್ಟರು. "ನಿನ್ನ ಕೂದ್ಲಿಂದ ನೀರು ತೊಟ್ಟಿಕ್ಕಿರೆ ನಮ್ಗೆ ಒಳ್ಳೇದಾಗ್ತಿಲ್ಲೆ..ಒಂದೋ ನೀ ಕೂದ್ಲು ತೆಗ್ಸು.. ಇಲ್ಲಾ ನಾ ಊಟ, ಆಸರಿ ಬಿಟ್ಟು ಪ್ರಾಣ ಬಿಡ್ತಿ.." ಎಂದು ಪಣ ತೊಟ್ಟ ಅಪ್ಪನ ಮುಂದೆ ಕೊನೆಗೂ ಮಗಳು ತಲೆಯೊಡ್ಡಿದ್ದಳು. ಅವಳ ಬದುಕು ಅಲ್ಲಿಗೆ ಸಂಪೂರ್ಣ ಬೋಳಾಗಿಹೋಯಿತು. ತಂಗಿಯ ಸಂತೋಷಕ್ಕಾಗಿ ಈ ಒಂದು ಸಂಪ್ರದಾಯವನ್ನಾದರೂ ತಡೆಯಬೇಕೆಂದು ಎಣಿಸಿದ್ದ ನರಸಿಂಹ ಜೋಯಿಸರಿಗೆ ಅತೀವ ನಿರಾಸೆ ದುಃಖಗಳಾದವು. ತದನಂತರ ಅವರಿಗೆ ಮೂಕಾಂಬೆಯ ಮೊಗನೋಡುವುದೇ ಕಷ್ಟವಾಗಿ ಹೋಯಿತು. ಅಂತೆಯೇ ಆಕೆಗೂ ಅಣ್ಣನ ನೋವಿನ ಅರಿವಾಗಿ, ಆದಷ್ಟು ಅವರ ಎದುರಿಗೆ ಬರುವುದನ್ನೇ ಕಡಿಮೆ ಮಾಡತೊಡಗಿದಳು. ಅವರಿಬ್ಬರ ಹೆಚ್ಚಿನ ಮಾತುಗಳೆಲ್ಲಾ ಸರಸಮ್ಮನ ಮೂಲಕವೇ ಆಗತೊಡಗಿತು.

ಮುಂದೆ ತವರು ಪಾಲಾದ ಮೂಕಾಂಬೆಯ ಆಸ್ತಿಹೊಡೆಯಲು ಅವಳ ಮೈದುನರು ಸಂಚುಹಾಕುತ್ತಿರುವುದನ್ನರಿತ ಜೋಯಿಸರು ಗಟ್ಟಿ ಮನಸುಮಾಡಿ ತಂಗಿಯನ್ನೂ ಅವಳ ಮಕ್ಕಳನ್ನೂ ಮೂರೂರಿಗೆ ತಂದು ಅವಳ ಮನೆಯಲ್ಲೇ ಬಿಡಬೇಕಾಯಿತು. ಆದರೂ ತಿಂಗಳಲ್ಲೆರಡು ಸಾರಿಯಾದರೂ ಅಲ್ಲಿಗೆ ಹೋಗಿ ಎಲ್ಲಾ ವಿಚಾರಿಸಿಕೊಂಡು ಬರುತ್ತಿದ್ದರು. ತವರು ಮನೆ ಬೆಂಬಲವೊಂದಿಲ್ಲದಿದ್ದರೆ ಅವಳಾಸ್ತಿಯನ್ನು ನುಂಗಿ ನೀರು ಕುಡಿಯುತ್ತಿದ್ದರು ಮೈದುನರು. ಮನೆಯವರ ಅಸಡ್ಡೆಗೆ, ಕೊಂಕು ನುಡಿಗೆ, ತನ್ನ ಮಕ್ಕಳಿಗಾಗುತ್ತಿರುವ ಅನ್ಯಾಯಕ್ಕೆ, ಎಲ್ಲವುದಕ್ಕೂ ಅವಳ ಉತ್ತರ ಬರಿಯ ಮೌನವಾಗಿರುತ್ತಿತ್ತು. ಅಖಂಡ ನಿರ್ಲಿಪ್ತತೆ ಅವಳ ಪಾಲಿಗೆಂದೋ ಒಲಿದಿತ್ತು. ಓದಿನಲ್ಲಿ ಮುಂದಿದ್ದರೂ ಓದಲಾಗದ ಸಂಕಟದ ಜೊತೆಗೆ, ಮನೆಯೊಳಗಿನ ಅಸಮಾನತೆ, ಪಕ್ಷಪಾತಿ ಗುಣಗಳಿಗೆಬೇಸತ್ತು ಬೆಂಗಳೂರನ್ನು ಸೇರಿ, ಯಾವುದೋ ನೌಕರಿ ಹಿಡಿದು, ಅಲ್ಲೇ ಒಂದು ಹುಡುಗಿಯನ್ನು ಮದುವೆಯಾಗಿ ನೆಲೆಸಿದ ಮೊದಲ ಮಗನ ಉದಾಸೀನತೆಗೆ, ತಮ್ಮ ಈ ಪಾಡಿಗೆ ಯಾರು ಹೊಣೆ ಎಂದು ಹುಡುಕುತ್ತಾ ಉತ್ತರ ಸಿಗದೇ ತಾನೇ ಕುದಿದು ಕುದಿದು ಬಡ ತಾಯಿಯ ಮೇಲೆ ಲಾವಾವನ್ನು ಹೊರಹಾಕಿ ದೂರಾದ ಎರಡನೆಯ ಮಗನ ನಿರ್ಲಕ್ಷತನಕ್ಕೂ ಮೂರೂರಜ್ಜಿಯದು ಈಗ ಒಂದೇ ಉತ್ತರ.."ದೇವರ ಹಣೆಯಲ್ಲಿ ಭಗವಂತ ಬರ್ದ ಹಾಂಗೆ ಆಗ್ತು.."
ವರುಷದ ಹಿಂದೆ ಊರಿಗೆ ಹೋಗಿದ್ದಾಗ ಮಾತು ಮಾತಿನ ಮೇಲೆ ಸರಸಮ್ಮ ಪಾವನಿಯಲ್ಲಿ ಹೇಳಿದ್ದರು. "ನಮ್ಮನೆ ಮೂಕಾಂಬೆ ಸ್ಥಿತಿ ನೋಡಿರೆ ಬೇಜಾರಾಗ್ತು ತಂಗಿ.. ಕಷ್ಟ ಪಟ್ಟು ಬೆಳ್ಸಿದ ಮಕ್ಕ ಹತ್ರ ಇಲ್ಲೆ. ಈಗ ಅವು ಮದ್ವೆ ಆಗಿ ಅವ್ರವ್ರ ಸಂಸಾರದಲ್ಲಿದ್ದೋ.. ಪಾಪ ಮೂಕಾಂಬೆ ಮನ್ಸು ಬಂದಾಗ ಇಲ್ಲಿಗೆ ಬಂದ್ಕತ್ತ... ಶ್ರೀಪತಿ ಕಿರಿ ತಮ್ಮನ ಮೊಮ್ಮಕ್ಳ ಆಡ್ಸಕತ್ನ ಇದ್ದು ಬಡ್ವೆ. ಇಲ್ಲೇ ಬಂದಿರು ಅಂದ್ರೂ ಅದ್ಕೆ ಮನಸಿಲ್ಲೆ.."ಇಷ್ಟು ವರ್ಷನೇ ಅಲ್ಲಿದ್ದಾಜು ಅತ್ಗೆ.. ಇನ್ನೆಂತಾ ಅಲ್ಲಿ ಇಲ್ಲಿ.. ಸುಮ್ನೇಯಾ.. ಆ ದೇವ್ರು ಈಗ್ಲಾದ್ರೂ ಅವ್ನಲ್ಲಿಗೇ ಕರ್ಸಕಂಡಿದ್ರೆ ಆರಾಮಾಗಿತ್ತು ನೋಡು.." ಹೇಳ್ತಿ ಕೊರಗತಾ ಇರ್ತು.. ಹ್ಮಂ.. ನೀ ಒಂದ್ಸಲ ಮೂರೂರಿಗೂ ಹೋಗ್ಬಾ. ನಿನ್ನ ರಾಶಿ ಕೇಳ್ತಿರ್ತು. ಸಣ್ಣಕಿರ್ಬೇಕಿದ್ರೆ ನೀನು ಅದ್ರ ಜೊತೆಗೇ ಇರ್ತಿದ್ದೆ ನೆನ್ಪಿಲ್ಯಾ.." ಎನ್ನಲು ಪಾವನಿಯ ಮನಸೆಲ್ಲಾ ಹಳೆ ನೆನಪುಗಳಿಂದ ಹಸಿರಾಗಿತ್ತು. ಮರುದಿವಸವೇ ಆಕೆ ಕುಮ್ಟೆಯ ಬಸ್ಸು ಹತ್ತಿ ಮೂರೂರನ್ನು ಸೇರಿದ್ದಳು.

ಹಿಂದೆ ಹರಿದ್ವರ್ಣ ಮರಗಳಿಂದ, ಹೂವಿನ ಗಂಧ, ಹಕ್ಕಿಗಳಿಂಚರದಿಂದ ನಳನಳಿಸುತ್ತಿದ್ದ ಕಾಡೊಂದು, ಮನುಜನ ಕ್ರೌರ್ಯಕ್ಕೆ ಬಲಿಯಾಗಿ ಬೋಳುಗುಡ್ದೆಯಾದಂತೆ ಕಾಣುತ್ತಿದ್ದ ಬೋಳು ತಲೆ, ಮಾಸಲು ಮಡಿಸೀರೆಯೊಂದನ್ನು ಸುತ್ತಿದ್ದ ಕೃಶ ಶರೀರ, ಗುಳಿ ಬಿದ್ದ ಕಳಾಹೀನ ಕಣ್ಗಳು, ವಯಸ್ಸಿನ ಪ್ರಭಾವದಿಂದಲೋ ಇಲ್ಲಾ ಬದುಕು ಕೊಟ್ಟ ಹೊಡೆತಗಳಿಂದಲೋ ತುಸು ಹೆಚ್ಚೇ ಬಾಗಿದ್ದ ಬೆನ್ನು, ಕಣ್ಣ ಕಿರಿದಾಗಿಸಿ ತನ್ನನ್ನೇ ದಿಟ್ಟಿಸಿ ನೋಡುತ್ತಾ ನಿಂತ ಮೂರೂರಜ್ಜಿಯನ್ನು ಕಂಡ ಪಾವನಿಗೆ ವಿಪರೀತ ಸಂಕಟವಾಯಿತು. ಆದರೆ ಈಗತಾನೇ ಅರಳಿದ ಹೂವಂತೆ ಕಂಗೊಳಿಸುತ್ತಿದ್ದ ಪಾವನಿಯನ್ನು ಅಚಾನಕ್ಕಾಗಿ ಅಲ್ಲಿ ಕಂಡು ಮೂಕಾಂಬೆಯ ಸಂತೋಷ ಹೇಳತೀರದು.

"ಕೂಸೆ, ನಿನ್ನಮ್ಮ ನನ್ನ ತೊಡೆಮೇಲೇ ಬೆಳ್ದಿದ್ದು. ಅತ್ಗೆಗಾದ್ರೂ ಎಲ್ಲಿತ್ತು ಪುರ್ಸೊತ್ತು ಮಕ್ಳ ಆಡ್ಸಲೆ? ಬೆನ್ನಿಗೇ ನಾಲ್ಕೈದು ಮಕ್ಕ ಆಗಿದ್ದ. ನಿನ್ನಾಯಿ ಹೆಚ್ಚಿನ ದಿವ್ಸ ಇದ್ದಿದ್ದು ಮೂರೂರಲ್ಲೇಯಾ.. ಕೇಳು ಬೇಕಿದ್ರೆ.. ಅಂತೂ ನೀನು ಈ ಮೂರೂರಜ್ಜಿ ನೆನ್ಪು ಮಾಡ್ಕಂಡು ಬಂದ್ಯಲಿ.. ಖುಶಿ ಆತು ನೋಡು.. ಈ ಮುದ್ಕಿನಾ ಮಾತಾಡ್ಸವೇ ಇಲ್ಲೆ ಈಗ..."ಎಂದು ಮುಕ್ತವಾಗಿ ನಕ್ಕರೂ ಆ ದನಿಯೊಳಡಗಿದ್ದ ವಿಷಾದ ಪಾವನಿಯನ್ನು ತಾಗಿತ್ತು.

ಬಂದ ನಾಲ್ಕು ದಿನ ಕಳೆದದ್ದೇ ಗೊತ್ತಾಗಿರಲಿಲ್ಲ ಆಕೆಗೆ. ಹೊಸ ಹುರುಪು ಬಂದಂತೆ ಮೂಕಾಂಬೆ ತನ್ನೂರನ್ನು ಸುತ್ತಿಸಿದ್ದಳು. ಅಪರೂಪವಾಗಿದ್ದ ತನ್ನ ಸ್ವಂತ ಮೊಮ್ಮಕ್ಕಳನ್ನು ಬಹುಶಃ ಪಾವನಿಯಲ್ಲಿ ಕಂಡಿದ್ದಿರಬೇಕು ಆ ಜೀವಿ. ಮೊದಮೊದಲು ತಂದೆಯೊಂದಿಗೆ ವರುಷಕ್ಕೊಮ್ಮೆಯಾದರೂ ಬರುತ್ತಿದ್ದ ಮೊಮ್ಮಕ್ಕಳು ಈಗ ತಮ್ಮ ಹೆತ್ತವರನ್ನು ಕೆಳುಹಿಸಿಕೊಟ್ಟೇ ದೊಡ್ಡುಪಕಾರ ಮಾಡುತ್ತಿದ್ದಂತಿತ್ತು. ಆಕೆಯ ಉತ್ಸಾಹ, ಸಂತೋಷ ಕಂಡು ಹಿಂತಿರುಗುವ ಅವಸರವನ್ನು ಮತ್ತೂ ಮೂರುದಿನಕ್ಕೆ ಮುಂದೂಡಿದ್ದಳು ಪಾವನಿ.

ಅಂದೂ ಹಾಗೆಯೇ ಹೊರೆಗೆ ಭೋರೆಂದು ಮಳೆ ಸುರಿಯುತ್ತಿದ್ದರೆ ಮೂರೂರಜ್ಜಿ ಬಿಸಿಬಿಸಿ ಹಲಸಿನಕಾಯಿ ಸೊಳೆ ಕರಿದು ತಂದಿಟ್ಟಿದ್ದಳು. ಬಟ್ಟಲು ತುಂಬಾ ತಿಂಡಿಯಿದ್ದರೂ ಒಂದೊಂದೇ ತಿನ್ನುತ್ತಾ ಅದೇನನ್ನೋ ಕಿವೊಯೊಳಗಿಟ್ಟುಕೊಂಡು ಗುನುಗುತ್ತಿದ್ದ ಪಾವನಿಯನ್ನು ನೋಡಿ ಮೋಜೆನಿಸಿತ್ತು ಮೂರೂರಜ್ಜಿಗೆ.
"ಕೂಸೆ ಎಂತದೇ ಅದು.. ಕೆಮಿ ಸರಿ ಕೇಳ್ಸದೇ ಹೋದವು ಹಾಕ್ಕಂಬಥಾ ವಸ್ತುನಾ ಇಟ್ಕಂಜೆ....?" ಎಂದು ಆಕೆಯನ್ನು ಕೇಳಿದಾಗ ಪಾವನಿಗೆ ನಗೆಯುಕ್ಕಿ ಬಂದಿತ್ತು.
"ಅಜ್ಜಿ ಇದು ಅದಲ್ಲ.. ಇದಕ್ಕೆ ಎಂ.ಪಿ. ತ್ರೀ ಹೇಳ್ತೋ.. ಇದ್ರಲ್ಲಿ ಚೊಲೋ ಚೊಲೋ ಹಾಡಿದ್ದು. ಈ ದಾರಾನ ಕಿವಿಗಿಟ್ಕಂಡ್ರೆ ಕೇಳ್ತು.." ಎಂದಾಗ ಆಕೆಗೆ ಅರ್ಥವೇ ಆಗಿರಲಿಲ್ಲ.
"ಎಂಥಾ ಸುಡಗಾಡೋ.. ಬಿಸಿ ಆರೋಗ್ತು ಮೊದ್ಲು ಇದ್ನ ತಿನ್ನು.. ಅಮೇಲೆ ಕೇಳ್ಲಕ್ಕು... ಅದ್ರಲ್ಲಿ ಎಲ್ಲಾ ಹಾಡೂ ಬತ್ತಾ? ಭಜನೆ ಎಲ್ಲಾ ಬತ್ತಾ?"ಎಂದು ಮುಗ್ಧವಾಗಿ ಪ್ರಶ್ನಿಸಲು ಪಾವನಿ.."ಅಜ್ಜಿ ಸದ್ಯಕ್ಕೆ ಇದ್ರಲ್ಲಿ ಭಾವಗೀತೆಗಳಿದ್ದು. ಅದ್ನೇ ಕೇಳ್ತಾ ಇದ್ದಿದ್ದಿ. ತಡಿ..ಕೊಡ್ತಿ..ಕೇಳು.."ಎನ್ನುತ್ತಾ ಆಕೆಯ ಕಿವಿಗಿಟ್ಟಿದ್ದಳು.
ಹಾಡು ಪ್ರಾರಂಭವಾಗಿ ಮುಗಿಯುವ ತನಕವೂ ಬಿಮ್ಮನೆ ಕುಳಿತಿದ್ದ ಮೂರೂರಜ್ಜಿಯ ಕಣ್ಣ ತುಂಬೆಲ್ಲಾ ನೀರು ತುಂಬಿತ್ತು. "ಕೂಸೆ ಈ ಹಾಡು ರಾಶಿ ಚೊಲೋ ಇದ್ದು.. ನಿಂಗೆ ಬರ್ತಾ ಹಾಡಲೆ? ಎಷ್ಟು ಚೊಲೋ ಹಾಡಿದ್ದು ಅದು.. ಈ ಹಾಡಿನಾಂಗೇಯಾ ನನ್ನ ಬದ್ಕೂವಾ ಅನಿಸ್ತಾ ಇದ್ದು ನೋಡು.. "ಎನ್ನಲು ಯಾವ ಹಾಡು ಬರುತ್ತಿತ್ತಪ್ಪಾ ಎಂಡು ರೆವೈಂಡ್ ಮಾಡಿ ಕೇಳಿದ್ದಳು ಪಾವನಿ.

ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ
ಬನ್ನಿ ನನ್ನೆಲೆಗಳೆ ಶಿಶಿರದಲ್ಲಿ
ಕಳುಹಿಸಿದ ಪತ್ರಗಳು ತಲುಪುದಿವೋ ಇಲ್ಲವೋ
ಎಲ್ಲಿ ಗುರಿ ತಪ್ಪಿದವೋ ಇರುಳಿನಲ್ಲಿ....

ಹೊರಗೆ ಬಿರುಮಳೆ, ಒಳಗೆ ಅಜ್ಜಿಯ ಕಣ್ಣೀರು, ಕಿವಿಯೊಳಗೆಲ್ಲಾ ಹಾಡಿನ ಮೊರೆತ... ವಿಚಿತ್ರ ಸಂಕಟವಾಗಿತ್ತು ಪಾವನಿಗೆ. ಅಪ್ರಯತ್ನವಾಗಿ ಆಕೆಯ ಕೆನ್ನೆಗಳೂ ಒದ್ದೆಯಾಗಿದ್ದವು.

"ಅಯ್ಯೋ ನನ್ನ ಮಳ್ಳೇ.. ಅಪ್ರೂಪಕ್ಕೆ ಬಂದ ನಿನ್ನ ಅಳ್ಸಿದೆ. ಬೇಜಾರಾಗಡ ತಂಗಿ. ಎಂತೋ ನೆನ್ಪಾತು.. ಹೋತು. ಬಿಟ್ಬುಡು. ಹಾಂ.. ಅದೆಂತದೋ ಸುಡುಗಾಡು ಹೆಸ್ರು ಅಂದ್ಯಲೆ ಇದ್ಕೆ? ನಂಗೆ ಇದ್ನ ನೋಡಿ ಅಣ್ಣಯ್ಯ ಮೊದ್ಲನೇ ಬಾರಿ ರೇಡ್ಯೋ ತಂದ ನೆನ್ಪಾತು ನೋಡು.."ಎಂದಾಗ ಇಬ್ಬರ ಕಣ್ಗಳೂ ಮಿನುಗಿದ್ದವು.
"ಎಂತಾ ಎಡವಟ್ಟಾಗಿತ್ತು ಅಜ್ಜಿ? ಅಜ್ಜ ತಂದ ರೇಡಿಯೋ ಸರಿ ಇತ್ತಿಲ್ಯ?"
"ಕೇಳು ಕೂಸೆ.. ಆಗಿನ ಕಾಲ್ದಲ್ಲಿ ರೇಡಿಯೋ ಇಟ್ಕಂಬದೇ ದೊಡ್ಡ ಪ್ರತಿಷ್ಠೆ ಆಗಿತ್ತಾ.. ಅಣ್ಣಯ್ಯನೂ ಮನಿಗೆ ತಂದ ರೇಡಿಯೋ. ಆದ್ರೆ ಆಗೆಲ್ಲಾ ಆ ಮೂಲೆ ಊರಿಗೆ ಸರಿಯಾಗಿ ಎಲ್ಲಿ ದನಿ ಬರ್ತಿತ್ತು ಹೇಳು? ಒಂದಿನ ರ‍ೇಡ್ಯೋ ಕೇಳಿದ್ರೆ ಮರ್ದಿನ ಕೇಳ್ತಿತ್ತಿಲ್ಲೆ.. ಅಣ್ಣಯ್ಯಂಗೆ ತಲೆ ಬಿಸಿ ಆತು. ಒಂದಿನ ಕುಪ್ಪಾ ಭಟ್ರ ಮನೆಗೆ ಹೋಗಿ ಅವ್ರ ಮಗ್ನ ಎಂತ ವಿಷ್ಯ ಕೇಳ್ದಾ? ಅಂವ ದೊಡ್ಡೂರಲ್ಲಿ ಓದಿ ಬಂದವ. ಅವಂಗೆಲ್ಲಾ ಗೊತ್ತಿರ್ತು ಹೇಳಿ. ಆ ಮಾಣಿ ಅಣ್ಣಯ್ಯನ್ನ ತಮಾಷೆ ಮಾಡವು ಹೇಳಿ.."ಜೋಯ್ಸ್ರೆ.. ಅದು ‘ಸಿಗಿನೆಲ್ಲು’ ನಿಮ್ಮಲ್ಲಿಗೆ ಬಪ್ಪಲೆ ನಮ್ಮನೆ ಗೊಬ್ರದಗುಂಡಿ ದಾಟಿ ಬರವಲ್ರಾ.. ಅದ್ಕೇ ಲೇಟಾಗ್ತು.. ಅದೂ ಅಲ್ದೇ ಕೆರೆ ಬದಿ ಶಿವ ಭಟ್ರ ಮನೆ ಏರಿ ಬೇರೆ ಹತ್ತಿ ಬರವು.. ಹಾಂಗಾಗಿ ನಿಮ್ಗೆ ಸರಿ ಬತ್ತಿಲ್ಲೆ ಕಾಣ್ತು.." ಹೇಳಿ ಕಳ್ಸದ. ಆಮೇಲೆ ಗೊತ್ತಾತು ನೋಡು ಅಂವ ಮಳ್ಳು ಮಾಡಿದ್ದ ಅಣ್ಣಯ್ಯನ ಹೇಳಿ.. ಗೊತ್ತಾದಾಗ ಅಣ್ಣಯ್ಯಂಗೆ ರಾಶಿ ಸಿಟ್ಟು ಬಂದಿತ್ತು.. ಎರ್ಡು ತಾಸು ಹಾರಾಡಿದ್ದ.." ಎಂದು ನಗಲು, ಆ ನಗು ಪಾವನಿಯ ಮೊಗವನ್ನು ಸೇರಿತ್ತು. ವಾರವಿಡೀ ತನ್ನ ಮೂರೂರಜ್ಜಿಯ ಬೆನ್ನಿಗಂಟಿಕೊಂಡೇ ಕಳೆದ ಪಾವನಿ ಬೆಂಗಳೂರಿಗೆ ಹಿಂತಿರುಗುವಾಗ ಮಧುರ ನೆನಪುಗಳ ಮೂಟೆಯನ್ನೇ ಹೊತ್ತೊಯ್ದಿದ್ದಳು.

ಹಳೆಯ ನೆನಪುಗಳನ್ನು ಮೆಲುಕುತ್ತಾ, ಕಾರಂತರ ಮೂಕಜ್ಜಿಯ ಕನಸುಗಳನ್ನು ಕಾಣುತ್ತಾ, ಮೆಲುವಾಗಿ ಸಿ.ಡಿ.ಪ್ಲೇಯರ್‌ನಿಂದ ಹೊರ ಹೊಮ್ಮುತ್ತಿದ್ದ ಭಾವಗೀತೆಯನ್ನು ಆಲಿಸುತ್ತಾ ಮೈಮರೆತಿದ್ದ ಪಾವನಿಯನ್ನೆಬ್ಬಿಸಿದ್ದು ಆಕೆಯ ಮೊಬೈಲ್ ರಿಂಗ್.
"ಪಾವನಿ ನಾನು ಶಂಕ್ರಮಾವ.. ಮೂರೂರತ್ತೆಗೆ ಹಾರ್ಟ್ ಅಟ್ಯಾಕ್ ಆಗಿ ಎರ್ಡುತಾಸಿನ ಹಿಂದೆ ಹೋಗೋತಡ ಮಾರಾಯ್ತಿ..ಲ್ಯಾಂಡ್‍ಲೈನಿಗೆ ಟ್ರೈ ಮಾಡಿಟ್ಟಿ.. ಹೋಜಿಲ್ಲೆ.. ಅಮ್ಮಂಗೆ ಹೇಳ್ಬುಡು. ನಾ ಅರ್ಜೆಂಟ್ ಮೂರೂರಿಗೆ ಹೊರ್ಟಿದ್ದಿ.." ಎಂದು ಕಟ್ ಮಾಡಲು ಆಕೆಯ ಮಡಿಲಲ್ಲಿದ್ದ "ಮೂಕಜ್ಜಿಯ ಕನಸುಗಳು" ಕೆಳಗೆ ಬಿತ್ತು. ಪ್ಲೇಯರ್ -
ಮರದ ಬುಡವನು ಕೊಡಲಿ
ಕಡಿವ ಮೊದಲೇ ಬನ್ನಿ.....
ತಾಯಿ ಬೇರಿನ ತವರ ದಾರಿ ಹಿಡಿದು...
ಬೇಸರದ ಬಯಲಿನಲಿ ಬೋಳು ಮರ ಕರೆಯುತಿದೆ.. - ಹಾಡನ್ನು ಹಾಡತ್ತಲೇ ಇತ್ತು.
(ಕನ್ನಡ ಪ್ರಭ ಪತ್ರಿಕೆಯ ಸಾಪ್ತಾಹಿಕ ಪ್ರಭ ವಿಭಾಗದಲ್ಲಿ ಪ್ರಕಟಿತ)
-ತೇಜಸ್ವಿನಿ ಹೆಗಡೆ

----****----


ಬುಧವಾರ ೨೮ ಅಕ್ಟೋಬರ್ ೨೦೦೯

ಪ್ರಳಯಾಂತಕವೀ ಪ್ರಳಯದ ಆತಂಕ!

"ಅಯ್ಯೋ ಅಮ್ಮೋರೆ...ಯಾಕಾಗಿ ನಾನು ದುಡೀ ಬೇಕು? ಯಾರಿಗಾಗಿ ದುಡ್ಡು ಜೋಡಿಸಬೇಕು ಅಂತಾನೇ ಗೊತ್ತಾಗ್ತಿಲ್ಲ ನೋಡಿ...." ಎಂದು ಗೊಣಗುತ್ತಾ, ಸಪ್ಪೆ ಮುಖ ಹೊತ್ತು ಬಂದ ಸರೋಜಮ್ಮನ ಈ ಹೊಸ ವರಸೆಕಂಡು ತುಸು ಚಕಿತಳಾದೆ.
"ಯಾಕಮ್ಮಾ? ಏನಾಯ್ತು? ಗಂಡ ಏನಾದ್ರೂ ಮತ್ತೆ ಕುಡ್ದು ಬಂದು ಬೈದ್ನಾ? ಇಲ್ಲಾ ಮಗ ಮತ್ತೆ ಸ್ಕೂಲ್‌ಗೆ ಚಕ್ಕರ್ ಹಾಕಿದ್ನಾ?"ಎಂದು ಕೇಳಿದೆ.

"ಅಯ್ಯಾ.. ಬಿಡಿಯಮ್ಮ... ಇನ್ನು ಹಾಂಗೆಲ್ಲಾ ಆದ್ರೂ ಅಷ್ಟು ತಲೆಕೆಡ್ಸಿಕೊಳಾಕೆ ಹೋಗೋದಿಲ್ಲ... ಏನೇ ಆದ್ರೂ ಎಷ್ಟು ವರ್ಷ ಹೇಳಿ? ಅಬ್ಬಬ್ಬಾ ಅಂದ್ರೆ ಇನ್ನೊಂದ್ ಮೂರು ವರ್ಷ ತಾನೆ? ಆಮೇಲೆ ಎಲ್ಲಾ ಗೋಳಿಗೂ ಮುಕ್ತಿನೇಯಾ.. ಇರೋಷ್ಟು ದಿನಾ ಚೆನ್ನಾಗಿ ತಿಂದುಂಡು, ಆ ಸ್ವಾಮಿ ಪೂಜಿಸ್ತಾ ಇದ್ಬಿಡೋನಾ ಅಂತಿದ್ದೀನಿ.. ಕೂಡಿಟ್ಟಿದ್ನೆಲ್ಲಾ ನೀರು ಪಾಲು ಮಾಡೋಕೆ ನಾನ್ಯಾಕೆ ಹೀಂಗೆ ದುಡೀಲಿ ಅನ್ನೀ? ಎಲ್ಲಾರೂ ಎಲ್ಲಾನೂ ಮುಳ್ಗೇ ಹೋಗೋವಾಗ ನನ್ನ ಪುಡಿಗಾಸಿಗೇನು ಬೆಲೆ?" ಎನ್ನುತ್ತಾ ಎಲ್ಲಾ ಸಿಟ್ಟು, ಸಿಡುಕು, ಹತಾಶೆಗಳನ್ನೇ ಗುಡಿಸಿ ಗುಂಡಾಂತರ ಮಾಡುವಂತೆ ನೆಲವೇ ಕಿತ್ತು ಹೋಗುವಂತೆ... ಗುಡಿಸತೊಡಗಿದಳು. ಇನ್ನೇನು ನನ್ನೂ ಕಸದ ಜೊತೆ ಸೇರಿಸಿ ಬಿಡುತ್ತಾಳೇನೋ ಅಂತ ಹೆದರಿಕೆಯಾಗಿ ಆದಷ್ಟು ಪಕ್ಕಕ್ಕೆ ಸರಿದೆ. ಅಂಥದ್ದೇನು ಆಗಿರಬಹುದಪ್ಪಾ? ಎಲ್ಲಾರೂ ಎಲ್ಲದೂ ಮುಳುಗಿಹೋಗೋವಂಥದ್ದು? ಎನ್ನುವ ಕುತೂಹಲ ಮಾತ್ರ ಗುಡಿಸಿ ಹೋಗಲಿಲ್ಲ.

"ಅಲ್ಲಾ.. ಬೆಳಿಗ್ಗೆ ಬೆಳಿಗ್ಗೆ ಏನಾಯ್ತು ನಿಂಗೆ? ಹೀಗೆಲ್ಲಾ ಮಾತಾಡ್ತಿದ್ದೀಯಲ್ಲಾ? ಎಲ್ಲರೂ.. ಎಲ್ಲಾದೂ ಮುಳ್ಗಿ ಹೋಗೋಕೆ ಬೆಂಗ್ಳೂರಲ್ಲೇನು ಸುನಾಮಿ ಬರತ್ತೆ ಅಂದ್ರಾ? ಹಾಂಗೆ ಬರೋದಿದ್ರೂ ಅದು ಶಿರಾಡಿ ಘಟ್ಟ ಹತ್ತಿ ಬರ್ಬೇಕು ನೋಡು.." ಎಂದು ನನ್ನ ತಮಾಶೆಗೆ ನಾನೇ ನಕ್ಕರೂ ಆಕೆ ನಗಲೇ ಇಲ್ಲ!

"ಅಲ್ರಮ್ಮಾ.. ನೀವು ಟೀವಿ ನೋಡಿಲ್ವಾ ನಿನ್ನೆ? "ಹೀಗೂ ಉಂಟೆ..?" ಕಾರ್ಯಕ್ರಮದಲ್ಲಿ ಪ್ರಳಯ ಆಗತ್ತಂತೆ... ಅದೂ ಸರಿಯಾಗಿ ಮೂರುವರ್ಷದಲ್ಲಿ.. ಅಂದ್ರೆ ೨೦೧೨ ಡಿಸೆಂಬರ್ ೨೧ಕ್ಕಂತ್ರವ್ವ... ನಮ್ಮ ವಠಾರದಲ್ಲೆಲ್ಲಾ ಇದೇ ಮಾತು ನೋಡಿ.. ನೀವು ನೋಡಿದ್ರೆ ಎನೂ ಗೊತ್ತೆ ಇಲ್ಲಾ ಅಂತಿದ್ದೀರಾ..." ಎನ್ನಲು ನಿಜಕ್ಕೂ ನಾನು ಆಶ್ಚರ್ಯಚಕಿತಳಾದೆ. ನಾನು ಈ ಪ್ರೊಗ್ರಾಂ ನೋಡಿರಲಿಲ್ಲ.(ಹೀಗೂ ಉಂಟೆಗಿಂತಲೂ ಹೀಗಿರಲು ಸಾಧ್ಯವೇ ಇಲ್ಲಾ ಎನ್ನುವಂತೆ ಚಿತ್ರಿಸುವ ಆ ಚಾನಲ್ ಸ್ವಲ್ಪ ನನ್ನ ಕಣ್ಣಿಂದ ದೂರವೇ. ವೈಭವೀಕರಣಕ್ಕೆ ಇನ್ನೊಂದು ಹೆಸರು ಅದು ಎನ್ನುವುದು ನನ್ನ ಅಭಿಮತ...).

"ಅಲ್ವೇ.. ೨೧ಕ್ಕೇ ಎಲ್ಲಾ ಸರ್ವನಾಶ ಅಂತಾದ್ರೆ ಮರುದಿನದಿಂದ ಯಾವ ಜೀವಿಯೂ ಇರೋದಿಲ್ವಂತೋ? ಆಮೇಲೆ ಏನಾಗೊತ್ತಂತೆ?" ಎಂದು ಅವಳನ್ನು ಮತ್ತೆ ಪ್ರಶ್ನಿಸಿದೆ ನನ್ನ ನಗುವನ್ನು ಅದುಮಿಟ್ಟುಕೊಂಡು.

"ಹಾಂಗಲ್ಲಾ.. ಕೆಲವು ಒಳ್ಳೇವ್ರು ಮಾತ್ರ ಬುದ್ಧಿಭ್ರಮಣೆ ಆಗಿ ಬದ್ಕತಾರಂತೆ... ಅವ್ರಿಗೆ ಈ ಯುಗದ ನೆನಪ್ಯಾವ್ದೂ ಇರೋದಿಲ್ವಂತೆ.. ಎಲ್ಲಾ ಹೊಸತಾಗೇ ಶುರು ಆಗೊತ್ತಂತೆ.. ಅದ್ಯಾವ್ದೋ ಮಾಯಾಂಗನೆ ಕ್ಯಾಲೆಂಡರ್ ಪ್ರಕಾರವಂತೆ ಕಾಣಮ್ಮ..." ಎನ್ನಲು ನನ್ನ ನಗೆಬುಗ್ಗೆ ಯಾವ ತಡೆಯೂ ಇಲ್ಲದೇ ಹೊರಬಂತು. "ಅದು ಮಾಯಾಂಗನೆ ಕ್ಯಾಲೆಂಡರ್ ಅಲ್ವೇ.. ಮಾಯನ್ ಕ್ಯಾಲೆಂಡರ್... ಸರಿ ಸರಿ.. ಪ್ರಳಯ ಆಗೋಕೆ ಇನ್ನೂ ಸಮಯ ಇದೆ ಅಲ್ವಾ? ಈಗ ಸಧ್ಯಕ್ಕೆ ನನ್ನ ಕೆಲ್ಸ ಮಾಡ್ಕೊಡು ಮಾರಾಯ್ತಿ. ಪ್ರಳಯ ಅಗೊತ್ತೆ ಅಂತ ಕೆಲ್ಸ ಬಿಟ್ಟು ಹೋಗ್ಬಿಡ್ಬೇಡ.. ಹಾಗೇನಾದ್ರೂ ಆದ್ರೆ ಮುಂದೆ ಆಗೋ ಪ್ರಳಯ ಇಂದೇ ಇಲ್ಲೇ ನನ್ನ ಜೊತೆ ಆಗ್ಬಿಡೊತ್ತೆ.." ಎಂದು ಅವಳನ್ನೂ ನಗಿಸಿ ಕೆಲ್ಸದ ಕಡೆ ಗಮನ ಹರಿಸಿದೆ.

ಆದರೂ ತಲೆಯೊಳಗೆ ಇದೇ ಯೋಚನೆ. ಏನಿದು ಮಾಯನ್ ಕ್ಯಾಲೆಂಡರ್ ಮಹಿಮೆ? ಜನ ಮರುಳೋ ಜಾತ್ರೆ ಮರುಳೋ? ಇತರರೂ ಈ ಪ್ರೊಗ್ರಾಂ ನೋಡಿರಬಹುದು.. ಇಲ್ಲಾ ಇದ್ರ ಬಗ್ಗೆ ಉಳಿದವರ ಯೋಚನೆ ಏನಾಗಿರಬಹುದು? ಎಂದು ತಿಳಿಯುವ ಸಣ್ಣ ಆಶಯ ಮನದೊಳಗೆ ಮೂಡಿತು. ನನಗೆ ಪರಿಚಯ ಇದ್ದವರೊಡನೆ, ಕೆಲವು ಸ್ನೇಹಿತರೊಡನೆ, ಆತ್ಮೀಯರೊಡನೆ, ಸಹ ಬ್ಲಾಗಿಗರೊಡನೆ ಮಾತಾಡುವಾಗ.. ಚಾಟ್ ಮಾಡುವಾಗ.. ಈ ವಿಷಯ ಪ್ರಸ್ತಾಪಿಸಿದೆ. ಚಾಟಿಂಗ್ ಸ್ಟೇಟಸ್‌ಬಾರ್ ನಲ್ಲೂ ಇದನ್ನು ಹಾಕಿದಾಗ ಹಲವರು ಪ್ರತಿಕ್ರಿಯಿಸಿದರು. ಈ ವಿಚಾರ ಮಂಥನದಲ್ಲಿ ಹಲವು ಸುಂದರ, ಹಾಸ್ಯಮಯ, ಚಿಂತನಾಶೀಲ ಅಭಿಪ್ರಾಯಗಳು ಹೊರಹೊಮ್ಮಿದವು. ಅವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ ನಾನು ಕಾಲ್ ಮಾಡಿದ್ದು ನನ್ನ ಬರಹಕ್ಕೆ ಅದರಲ್ಲೂ ವಿಶೇಷವಾಗಿ ಕಥಾರಚನೆಗೆ ಸ್ಪೂರ್ತಿಯಾಗಿರುವ ಭುವನೇಶ್ವರಿ ಹೆಗಡೆಯವರಿಗೆ. ಇದಕ್ಕೆ ಕಾರಣವೂ ಇದೆ. ಹತ್ತನೆಯ ತರಗತಿಯಲ್ಲೋ ಇಲ್ಲಾ ಒಂಭತ್ತನೆಯ ತರಗತಿಗೋ ನಮಗೆ ಅವರ ಲೇಖನವೊಂದರ ಪಾಠವಿತ್ತು. ಅದು ಪ್ರಳಯದ ಕುರಿತೇ ಆಗಿತ್ತು. ತುಂಬಾ ಹಾಸ್ಯಮಯವಾಗಿ ಬರೆದಿದ್ದರು. ಅದು ಇನ್ನೂ ನನ್ನ ಮನಃಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ಅವರು "ಮೊಸರೊಳಗೆ ಬೆಣ್ಣೆ ಮುಳುಗಿದಾಗ ಪ್ರಳಯ ಆಗುತ್ತದೆಂದು" ಹೇಳಿ ಬರೆದಿದ್ದರು. ಅದನ್ನೋದಿ ನಾವೆಲ್ಲಾ ತುಂಬಾ ನಕ್ಕಿದ್ದೆವು. ಅದು ನೆನಪಾಗಿ ಅವರಿಗೇ ಕಾಲ್ ಮಾಡಿದೆ. ವಿಷಯ ತಿಳಿದ ಅವರು ಕೊಟ್ಟ ಮೊದಲ ಪ್ರತಿಕ್ರಿಯೆ ಒಂದು ದೊಡ್ಡ ನಗು. "ಮೊಸ್ರಲ್ಲಿ ಬೆಣ್ಣೆ ಮುಳ್ಗ್‌ದಾಗ ಪ್ರಳಯ ಆಗ್ತು ಹೇಳಿದ್ನಲೇ.. ಈಗೆಂತ ಮೊಸ್ರೊಳ್ಗೆ ಬೆಣ್ಣೆ ಮುಳ್ಗಿದ್ದಡ?" ಎಂದು ಕೇಳಿದಾಗ ನಗು ಈ ಕಡೆಯೂ ಹರಿದಿತ್ತು. ಮಾತು ಮಾತಲ್ಲಿ ಅವರೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡರು.

ಕೆಲವು ವರುಷಗಳ ಹಿಂದೆ ಜನಪ್ರಿಯ ವಾರ ಪತ್ರಿಕೆಯೊಂದು ೨೦೦೦ದಲ್ಲಿ ಜಗತ್ ಪ್ರಳಯವಾಗುತ್ತದೆ ಎಂದು ಪ್ರಕಟಿಸಿತ್ತು. ಅತಿ ರಂಜಿತ, ಅದ್ಭುತ ಚಿತ್ರಗಳ ಮೂಲಕ ಓದುಗರನ್ನು ಸೆಳೆದಿತ್ತು. ನಾನಾಗ ಬಿ.ಎಸ್ಸಿ. ಓದುತ್ತಿದ್ದೆ. ಇನ್ನೂ ನನಗೆ ನೆನಪಿದೆ. ಕನ್ನಡ ಎಂದರೆ ಎನ್ನಡ ಎನ್ನುವ ಕಲವರೂ ಆಗ ಈ ಪತ್ರಿಕೆಯನ್ನು ತಂದು ಎಲ್ಲೆಂದರಲ್ಲಿ ಓದುತ್ತಿದ್ದರು. ಲ್ಯಾಬ್, ಕಾರಿಡಾರ್ ಎಲ್ಲ ಕಡೆ ಇದೇ ಸುದ್ದಿ... ಸಾವಿನ ಭೀತಿ ಅವರನ್ನು ಆ ರೀತಿ ಆಡಿಸಿತ್ತೇನೋ...! ಇದೇ ಸಮಯದಲ್ಲೇ ಭುವನೇಶ್ವರಿಯವರು ಕಾಲೇಜ್ ವಾರ್ಷಿಕೋತ್ಸವಕ್ಕೆಂದು ಗೆಸ್ಟ್ ಆಗಿ ಹೋಗಿದ್ದರಂತೆ. ಆ ಕಾಲೇಜಿನ ಪ್ರಿನ್ಸಿಪಾಲರು ಇವರಲ್ಲೊಂದು ಕೋರಿಕೆ ಮಾಡಿಕೊಂಡರಂತೆ. "ದಯವಿಟ್ಟು ನೀವು ನಿಮ್ಮ ಭಾಷಣದಲ್ಲಿ ಸ್ವಲ್ಪ ತಿಳಿ ಹೇಳಿ... ಪ್ರಳಯ ಆಗೋವಂಥದ್ದು ಏನೂ ಇಲ್ಲ ಎಂದು. ಭಯ ಬೇಡ ಎಂದು ಹೇಳಿ... ಹಲವು ವಿದ್ಯಾರ್ಥಿಗಳು ಭಯ ಪಟ್ಟು, ನಿರುತ್ಸಾಹಗೊಂಡು ಓದೂ ಬೇಡ ಎಂದು ಹೇಳುತ್ತಿದ್ದಾರೆ.." ಎಂದರಂತೆ! ಇದನ್ನು ಕೇಳಿ ಭುವನೇಶ್ವರಿ ಅವರಿಗೆ ತುಂಬಾ ಆಶ್ಚರ್ಯವಾಗಿತ್ತಂತೆ. ಅಂತೆಯೇ ಅಲ್ಲಿಯೂ ತಮ್ಮ ಹಾಸ್ಯ ಚಟಾಕಿಯ ಮೂಲಕ ನಗೆಬುಗ್ಗೆಯನ್ನು ಚಿಮ್ಮಿಸಿ, ಪ್ರಳಯದ ಭಯವನ್ನೋಡಿಸಲು ಬಹುಪಾಲು ಯತ್ನಿಸಿದ್ದರಂತೆ. ಇದನ್ನು ಕೇಳಿ ನನಗೆ ಮತ್ತೂ ಆಶ್ಚರ್ಯ ವಾಯಿತು.. "ಹೀಗೂ ಉಂಟೆ? " ಎಂದೆನಿಸಿಯೇ ಬಿಟ್ಟಿತು.

"ಪ್ರಳಯ ಅನ್ನೋದು ಕಪೋ ಕಲ್ಪಿತ. ಎಲ್ಲವೂ ಒಂದೇ ದಿವಸ ನಾಶ ಆಗೋಕೆ ಸಾಧ್ಯನೇ ಇಲ್ಲ. ಹಾಂ.. ಮನುಷ್ಯನ ದುರಾಸೆಗಳಿಂದಾಗಿ ಅಪಾರ ಜೀವ ಹಾನಿ ಆಗಬಹುದು. ಅದು ಆಗಾಗ ಆಗುತ್ತಲೇ ಇದೆ ಕೂಡ.. ಸುಮ್ಮಸುಮ್ಮನೇ ಜನರನ್ನು ಭೀತಿಗೊಳಿಸುವ ಯತ್ನವಿದೆಲ್ಲಾ.." ಎಂದು ಮೂರು ವರುಷದಲ್ಲಿ ಆಗುವ ದಿಢೀರ್ ಪ್ರಳಯದ ಯೋಚನೆಯೇ ಶುದ್ಧ ತಪ್ಪು ಎಂದರು.
ತದನಂತರ ನಾನು ಕೆಲವು ಬ್ಲಾಗಿಶ್ಚರುಗಳನ್ನು, ಸ್ನೇಹಿತರನ್ನು ಅವರ ಅಭಿಪ್ರಾಯ ತಿಳಿಯಲು ಸಂಪರ್ಕಿಸಿದೆ. ಅವರ ಉತ್ತರಗಳು, ಅನಿಸಿಕೆಗಳು ಈ ಕೆಳಗಿನಂತಿವೆ..

೧. "ವಿಕಾಸವಾದ"ದಲ್ಲಿ ತೊಡಗಿರುವ ವಿಕಾಸ್ ಹೆಗಡೆ - "ಹೌದಾ.. ಹಾಂಗೆ ಹೇಳಿದ್ವಾ? ಅಯ್ಯೋ... ಸರಿ ಹಾಂಗಿದ್ದ್ರೆ... ಮೂರುವರ್ಷದೊಳ್ಗೆ ನಾನು ಮದ್ವೆ ಮಾಡ್ಕೊಬೇಕು... ಬ್ಯಾಚುಲರ್ ಆಗಿ ಸಾಯೋಕೆ ಇಷ್ಟ ಇಲ್ಲೆ.. ಹ್ಹ ಹ್ಹ ಹ್ಹ.." (ಹ್ಮಂ.. ಆದಷ್ಟು ಬೇಗ ನಾಲ್ಕನೆ ಗೆಟಗರಿಯಿಂದ ಭಡ್ತಿ ಪಡೀತೆ ಹೇಳಾತು ಹಾಂಗಿದ್ರೆ....:) )
೨. "ನಾವೇಕೆ ಹೀಗೆ?" ಎನ್ನುವ ಲಕ್ಷ್ಮಿ - "ನಂಬೊಲ್ಲ ಒಂದ್ಸರ್ತಿ.. ನಂಬೊಲ್ಲ ಎರಡಸರ್ತಿ.. ನಂಬೊಲ್ಲ ಮೂರಸರ್ತಿ....ಮಾಯನ್ ಕ್ಯಾಲೆಂಡರ್ ತುಂಬಾ ಕ್ರೂಡ್ ರಚನೆ ಆಗಿರೋದು. ಅವರು ಚಂದ್ರನ ದೂರ ತಿಳ್ಕೊಂಡ ತಕ್ಷಣ ಅವ್ರ ಎಲ್ಲಾ ಪ್ರಿಡಿಕ್ಷನ್ನೂ ಸರಿ ಎನ್ನೋಕೆ ಆಗಲ್ಲ.. ಇದೆಲ್ಲಾ ಬರೀ ಸುಳ್ಳು.."

೩. "ಅಂತರ್ವಾಣಿ"ಯನ್ನು ಹಂಚಿಕೊಂಡ ಜಯಶಂಕರ್ - "ಹೌದಾ ತೇಜಕ್ಕ.. ಗೊತ್ತಿರ್ಲಿಲ ನೋಡಿ.. ಒಂದು ಲೆಕ್ಕದಲ್ಲಿ ಒಳ್ಳೇದು ಬಿಡಿ.. ಮನೆಕಟ್ಟಿ ಸಾಲದಲ್ಲಿದ್ದೀನಿ. ಜೀವ್ನ ಪೂರ್ತಿ ತೀರ್ಸೊದಲ್ಲೇ ಆಗೊತ್ತೆ ಅಂತಿದ್ದೆ. ಪ್ರಳಯ ಆಗಿ ಸಾಲದಿಂದನೂ ಮುಕ್ತಿ ಸಿಗೊತ್ತೆ ಬಿಡಿ... :) " (ಇದನ್ನು ಕೇಳಿ ಮನಃಪೂರ್ತಿ ನಕ್ಕು ಬಿಟ್ಟಿದ್ದೆ..:)).
೪. "ತುಂತುರು ಹನಿ" ಸಿಂಪಡಿಸುವ ಶ್ರೀನಿಧಿ - "ಅಯ್ಯೋ ನಿಂಗೆ ತೀರಾ ಮಳ್ಳಾಗೋಜೆ ಅತ್ಗೆ.. ನೀ ಇಂಥದ್ದನ್ನೆಲ್ಲಾ ಪ್ರಶ್ನೆ ಕೇಳೋದೇ ಅಲ್ಲಾ.." (ಮುಂದೆ ನಾನು ಮಾತಾಡೋ ಹಾಂಗೇ ಇಲ್ಲಾ.. ಗಪ್‌ಚುಪ್!)
೫. "ಮೌನ ಗಾಳ" ಹಾಕಿ ಕುಂತ ಸುಶ್ರುತ - "ಹೋದ್ರೆ ಹೋಗ್ಲಿ ಬಿಡೆ.. ಎಲ್ರ ಜೊತೆ ನಾವೂ ಹೋಗೋದಾದ್ರೆ ಹೋಗಾಣ ಅದ್ಕೇನಂತೆ.. ಎಲ್ಲಾ ಒಂದ್ಸಲ ಫಿನಿಶ್ ಆಗ್ಬೇಕು.. ಒಬ್ಬಿಬ್ರು ಉಳ್ಯೋದಾದ್ರೆ ಬೇಡ.. ಎಲ್ಲಾ ಹೋಗ್ಲಿ.. ನಂದಂತೂ ಸಹಮತಿ ಇದ್ದು ನೋಡು.." (ಪ್ರಳಯಕ್ಕೆ ಇವರ ಸಹಮತಿ ಇದೆ,, ನೋಟೆಡ್!!! :) ).

೬. "ಮನಸೆಂಬ ಹುಚ್ಚು ಹೊಳೆಯಲ್ಲಿ" ಈಜುತ್ತಿರುವ ಚಿತ್ರ - "ಅಯ್ಯೋ.. ನಿಂಗೇನಾಯ್ತೆ? ಇನ್ನೂ ನೀನು ಈ ಪ್ರಳಯದ ಹುಚ್ಚಿಂದ ಹೊರ್ಗೆ ಬಂದಿಲ್ವಾ? ಹ್ಮ್ಂ.. ಹಾಂಗಾಗೋದಾದ್ರೆ ಅಮೇರಿಕಾಕ್ಕೆ ಪ್ಲೇನ್ ಟಿಕೆಟ್ ಮೊದ್ಲೇ ಮಾಡ್ಸಿ ಇಟ್ಕೋಬೇಕು.. " ನಂಗೆ ಆಶ್ಚರ್ಯ "ಯಾಕೆ ಚಿತ್ರಕ್ಕ? ಎಲ್ಲಾ ಕಡೆನೂ ಪ್ರಳಯ ಆಗಿರೊತ್ತಲ್ಲಾ..?" "ಅಯ್ಯೋ ಅವ್ರ ಪ್ರಕಾರ ಡಿಸೆಂಬರ್ ೨೧ಕ್ಕೆ ಅಲ್ದಾ? ಅಮೇರಿಕಾಕ್ಕೆ ೨೧ ಡೇಟ್ ಆಗೋದು ಮರುದಿನ...ಸೋ... ಈ ದಿನ ನಾವು ಪ್ಲೇನ್ ಹತ್ತಿದ್ರೆ ಅಲ್ಲಿ ಪ್ರಳ ಆಗೋಮುಂಚೆ ಇರ್ತಿವಿ. ಭಾರತದಲ್ಲಿ ಪ್ರಳಯ ಶುರು ಆಗೋವಾಗ ನಾವು ಪ್ಲೇನ್‍ನಲ್ಲಿ ಇರ್ತಿವಲ್ಲಾ... ಹಾಗೆಯೇ ಅಲ್ಲಿ ಪ್ರಳಯ ಶುರು ಆಗೋ ಮೊದಲು ಮತ್ತೆ ಹೊರಟ್ರೆ ಇಲ್ಲಿಗೆ ನೀರ ಮೇಲೆ ಲ್ಯಾಂಡ್ ಆಗ್ಬಹುದು ನೋಡು.." (ಭಾರೀ ಯೋಚನೇನೆ.. ಆದ್ರೆ ಜೊತೆಗೆ ಹಡಗಿನ ಟಿಕೆಟ್ ಕೂಡಾ ಮಾಡ್ಸಿ ಇಟ್ಕೊಂಡಿರ್ಬೇಕು... ಲ್ಯಾಂಡ್ ಆಗೋಕೆ ಹಡಗು ಬೇಕು ತಾನೆ? :)).
೭. "ಕ್ಷಣ ಚಿಂತನೆಯ" ಚಂದ್ರಶೇಖರ್ - "ಹೌದು ಮೇಡಂ... ಹೀಗೂ ಉಂಟೆ? ಪ್ರೋಗ್ರಾಂನಲ್ಲಿ "ಬ್ರಹ್ಮ ರಹಸ್ಯ" ಅಂತ ಬಂದಿತ್ತು ಅದನ್ನ ನೋಡಿದ್ದೆ. ಈ ಬ್ರಹ್ಮ ರಹಸ್ಯ ಬರೆದಿದ್ದು ಪಿ.ಯು.ಸಿ ಓದಿದ ಹುಡುಗನಂತೆ ಮೇಡಂ... ಅದು ಭಾಗ-೧, ೨ ಹಾಗೂ ೩ ಇದೆಯಂತೆ.. ನಂಬೋಕಂತೂ ಆಗೊಲ್ಲಾ ನೋಡಿ..." (ಓಹೋ ಇದು ಬ್ರಹ್ಮ ರಹಸ್ಯದ ಕಥೆಯೋ... ಹಾಗಿದ್ದರೆ ಇದೊಂದು ಸುಳ್ಳಿನ ಬ್ರಹ್ಮ ಗಂಟೇ ಸರಿ ಎಂದೆನಿಸಿತು ನನಗೆ).
೮. "ಮಧುವನದಲ್ಲಿ" ವಿಹರಿಸುತ್ತಿರುವ ಮಧುಸೂದನ್ - "ಇದ್ರಲ್ಲಿ ನಂಬಿಕೆ ಇಲ್ಲಾ...ಸಾಕಷ್ಟು ವೈಜ್ಞಾನಿಕ ಸಾಕ್ಷಿಗಳೂ ಇಲ್ಲಾ... ಆದ್ರೆ ಒಂದೇ ಸಲ ಎಲ್ಲರೂ ಹೋಗೋದಾದ್ರೆ ಒಳ್ಳೇದೇ.. ಆಗ್ಲಿ ಬಿಡು.... ಎಲ್ಲರಿಗೂ ಒಟ್ಟಿಗೇ ಮೋಕ್ಷ ಸಿಕ್ಕಿದಂತಾಗ್ತು.."

ತಮ್ಮ ತಮ್ಮ ಕ್ಷೇತ್ರದಲ್ಲಿ ವಿಜ್ಞಾನಿಗಳಾಗಿರುವ "ಸಾಗರದಾಚೆಯ ಇಂಚರ"ಹೊರಡಿಸುವ ಡಾ.ಗುರುಮೂರ್ತಿ ಹಾಗೂ "ಜಲನಯನ"ದ ಮೂಲಕ ನೋಡುವ ಡಾ.ಆಝಾದ್ ಅವರು ವೈಜ್ಞಾನಿಕ ನೆಲೆಯಲ್ಲಿ ಈ ವಿಷಯವನ್ನು ಅಲ್ಲಗಳೆದರು.

ಗುರುಮೂರ್ತಿ - "ನೋ ಛಾನ್ಸ್... ಪ್ರಳಯ ಆಗೋಕೆ ಸಾಧ್ಯನೇ ಇಲ್ಲಾ. ಇನ್ನೇನಾದ್ರೂ ಭೂಮಿ ತನ್ನ ಅಕ್ಷಾಂಶದಿಂದ ದಿಕ್ಕು ತಪ್ಪಿದರೆ ಮಾತ್ರ ಹಾಗಾಗಬಹುದಷ್ಟೇ. ಆದರೆ ಅದೂ ಅಷ್ಟು ಸುಲಭವಲ್ಲ. ಇನ್ನು ಸಮುದ್ರ ಮಟ್ಟ ಪ್ರತಿ ವರ್ಷ ಏರುತ್ತಲೇ ಇದೆ. ಇದೆಲ್ಲಾ ಗ್ಲೋಬಲ್ ವಾರ್ಮಿಂಗ್‌ನಿಂದಾಗುತ್ತಿದ್ದು.. ಇದು ಸುಮಾರು ೨೦೦ ವರ್ಷಗಳಿಂದಲೂ ನಡೆಯುತ್ತಿದೆ. ಎಲ್ಲೋ ಒಂದಿಷ್ಟು ಭೂಭಾಗಳು ಮುಳುಗಡೆ ಆಗಬಹುದು ಕ್ರಮೇಣ... ಬಿಟ್ಟರೆ ಸಂಪೂರ್ಣ ನಾಶ ಸಾಧ್ಯವೇ ಇಲ್ಲ. ಇನ್ನು ಮನುಷ್ಯರೇ ಅಣುಬಾಂಬುಗಳ ಮೂಲಕ ಕೃತ್ರಿಮ ಪ್ರಳಯ ತಂದರೆ ತರಬಹುದಷ್ಟೇ. ಸ್ವಾಭಾವಿಕವಾಗಿ ಭೂಮಿಯ ಸಂಪೂರ್ಣ ನಾಶ ಆಗೊಲ್ಲ.. ನನ್ನ ಅಭಯ ಇದ್ದು..೨೦೦% ಹೆದ್ರಿಕೆ ಬೇಡ.. ಪ್ರಳಯ ಆಗ್ತಿಲ್ಲೆ....:)" (ಇಷ್ಟು ಅಭಯ ಸಿಕ್ಕರೆ ಸಾಕಲ್ಲಾ....:) ).

ಆಝಾದ್ - "ನಿಮ್ಗೆ ಈ ಪ್ರಳಯದ ಯೋಚ್ನೆ ಯಾಕೆ ತಲೆ ತಿನ್ತಾ ಇದೆ?... ಆ ಮಾಯನ್ ಕ್ಯಾಲೆಂಡರ್ ಅವರ ಸಂಖ್ಯಾಕ್ರಮ ವಿಚಿತ್ರವಾಗಿದೆ. ಹಾಗೊಂದು ವೇಳೆ ೨೦೧೨ಗೆ ಪ್ರಳಯ ಆಗ್ಬೇಕು ಅಂತಾಗಿದ್ರೆ ಅದ್ರ ಇಫೆಕ್ಟ್ ಸುಮಾರು ೫೦-೬೦ ವರ್ಷಗಳ ಮೊದಲೇ ಆಗಬೇಕಾಗುತ್ತಿತ್ತು. ಸಿಂಪಲ್ ರೊಟೇಷನ್, ರೆವಲ್ಯೂಷನ್, ಲೈಟ್ ಟ್ರಾವೆಲ್, ಎನರ್ಜಿ ಡಿಸಿಪೀಷನ್ ಇವುಗಳನ್ನು ಲೆಕ್ಕ ಹಾಕಿ ಎಲ್ಲ ಡೈನಾಮಿಸಮ್ ಎಕ್ಸ್ಟ್ರಾಪೊಲೇಟ್ ಮಾಡಿದ್ರೆ.. ಇದು ಇನ್ನು ಮೂರುವರ್ಷದೊಳಗಂತೂ ಅಸಾಧ್ಯ. ರಾತ್ರಿ ಆಗುವ ಮೊದಲು ಸಂಜೆ ಆಗ್ಬೇಕು ತಾನೆ? ಹಾಗೇ ಏನಾದ್ರೂ ಒಂದು ದೊಡ್ಡ ವಿಪತ್ತು ಬರುವ ಮೊದಲು ಅದರ ಮುನ್ಸೂಚನೆ ಸಿಗ್ಬೇಕು. ದೊಡ್ಡ ಉಲ್ಕೆಯೋ ಇನ್ನಾವುದೋ ಈ ಭೂಮಿಯನ್ನು ಬಡಿಯಬೇಕೆಂದರೆ ಅದು ಬಹು ದೂರವನ್ನು ಕ್ರಮಿಸಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುವುದು ಮತ್ತು ಅದು ನಮ್ಮ ಗಮನಕ್ಕೂ ಬರುವುದು. ನಿಮಗೆ ಇನ್ನೊಂದು ವಿಷಯ ಗೊತ್ತೇ?.... ಸೌದಿ ರಾಷ್ಟ್ರಗಳಲ್ಲಿ ಇತ್ತೀಚಿಗೆ ಕೆಲವಡೆ ಸ್ನೋ ಫಾಲ್ ಆಗುತ್ತಿದೆಯಂತೆ..!!! ಸುಮಾರು ೫೩ ಡಿಗ್ರಿ ತಾಪಮಾನ ಇರುವ ಪ್ರದೇಶವದು. ಜನರ ದುರಾಸೆ, ಪ್ರಕೃತಿಯೊಂದಿಗಿನ ದುರ್ವರ್ತನೆಯಿಂದ ಹವಾಮಾನ ವೈಪರೀತ್ಯವಾಗುತ್ತಿದೆ. ಇದರಿಂದ ಅನೇಕ ಜೀವ ಹಾನಿ ಮುಂದೆ ಆಗಬಹುದಷ್ಟೇ. ಅಲ್ಲಾರಿ ಅಷ್ಟಕ್ಕೂ ಪ್ರಳಯ ಆಗೇ ಆಗೊತ್ತೆ ಅಂತಾದ್ರೆ ಏನು ಮಾಡೋಕೆ ಆಗೊತ್ತೆ? ಒಂದು ಬಿಲ್ಡಿಂಗ್ ಬೀಳೊತ್ತೆ ಅಂದ್ರೆ ಜನ ಓಡಿ ಬಚಾವ್ ಆಗ್ತಾರೆ. ಆದ್ರೆ ಇಡೀ ಭೂಮಿನೇ ಇರೊಲ್ಲ ಅಂದ್ರೆ ಏನು ಮಾಡೋಕೆ ಆಗೊತ್ತೆ?...." (ಹ್ಮ್ಂ.. ನಿಜ. ಆಗದೇ ಹೋಗದೇ ಇರೋ ವಿಚಾರಕ್ಕೆ ಜನ ಯಾಕೆ ಇಂದೇ ಈಗಲೇ ತಲೆ ಕೆಡಿಸಿಕೊಂಡು ಕಾಣದ ಪ್ರಳಯದ ಆತಂಕಕ್ಕೆ ಕೆಲ ಕಾಲವಾದರೂ ತುತ್ತಾಗುತ್ತಾರೋ ನಾ ಕಾಣೆ!!!).

ಇವಿಷ್ಟು ನನ್ನ ಮಂಥನದೊಳಗೆ ಸಿಕ್ಕ ವಿಚಾರಧಾರೆಗಳು. ಅದೆಷ್ಟೋ ಸಹಮಾನಸಿಗರಲ್ಲೂ ಕೇಳಬೇಕೆಂದಿದ್ದೆ. ಆಗಲಿಲ್ಲ. ಈ ವಿಷಯದ ಕುರಿತಾಗಿ ನೀವೂ ನಿಮ್ಮ ಅಭಿಪ್ರಾಯಗಳನ್ನು... ಇತರರಿಂದ ಕೇಳಿದ, ಓದಿದ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಬೇಕಾಗಿ ವಿನಂತಿ.

ಇನ್ನು ಕೊನೆಯದಾಗಿ ನಾನು ಅಂದರೆ "ಮಾನಸ" -

ಆ ಚಾನಲ್‌ನಲ್ಲಿ ಈ ಪ್ರೋಗ್ರಾಂ ಪ್ರಸಾರವಾಗಿದ್ದು ನಾನು ನೋಡಲಿಲ್ಲ ಎಂದು ಮೊದಲೇ ಹೇಳಿದ್ದೇನೆ. ಮೊದಲಸಲ ನಾನು ಕೇಳಿದ್ದೇ ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಸರೋಜಳ ಮೂಲಕ. ಆಮೇಲೆ ನೋಡಿದರೆ ನಮ್ಮ ಫ್ಲ್ಯಾಟ್ ತುಂಬಾ ಇದೇ ಸುದ್ದಿ. ಏನೋ ಆಗುವುದಿದೆ.. ಅದು ನಾಳೆಯೇ ಘಟಿಸುತ್ತದೆ ಅನ್ನೋ ರೀತಿಯಲ್ಲಿ ಎಲ್ಲರೂ ಇದನ್ನೇ ಮಾತಾಡಿಕೊಳ್ಳುತ್ತಿದ್ದರು. "ಅಲ್ಲಾರೀ.. ಹೀಗಾದ್ರೆ ಹೇಗೆ? ಎಷ್ಟು ಕಷ್ಟ ಪಟ್ಟು ಮಗ್ನ "ಆ" ಸ್ಕೂಲ್‌ಗೆ ಒಂದೂವರೆ ಲಕ್ಷ ಕೊಟ್ಟು ಸೇರ್ಸಿದೀವಿ. ಅದೆಲ್ಲಾ ವೇಸ್ಟ್ ಆಗೊಲ್ವಾ? ಛೇ ಏನೂ ಬೇಡ ಅನ್ಸೊತ್ತೆ ಇದ್ನ ಕೇಳಿದ್ರೆ.." ಎಂದು ಒಬ್ಬರು ಅಂದ್ರೆ... "ನಾನಂತೂ ನನ್ನ ಮಗ್ಳ ಇಂಜಿನೀಯರಿಂಗ್ ಸೀಟ್‌ಗೆ ಡೊನೇಷನ್ ಒಟ್ಟು ಹಾಕಲ್ಲ ಇನ್ನು.. ಸುಮ್ನೇ ಒದ್ದಾಡಿ ಸಾಯೋಕಾ...!" ಅಂತ ಇನ್ನೊಬ್ರ ವರಾತ. "ಯೇ ಸಬ್ ಪ್ರಭೂಕಿ ಪ್ರಕೋಪ್ ಹೈ... ಅಗರ್ ಆಪ್ ಕಲ್ಕಿ ಭಗವಾನ್ ಕೋ ಪೂಜತೇ ಹೈಂ ತೋ ಕುಛ್ ನಹಿ ಹೋಗಾ.. ಆಜ ಸೇ ಹೀ ಕಲ್ಕಿ ಭಗವಾನ್ ಕೋ ಮಾನಿಯೇ,,"(="ಇದೆಲ್ಲಾ ದೇವರ ಕೋಪದಿಂದಾಗುತ್ತಿರುವುದು.. ನೀವು ಕಲ್ಕಿ ಭಗವಾನ್‌ರನ್ನು ಪೂಜಿಸಿ.. ಅವರನ್ನು ಪೂಜಿಸುವವರಿಗೆ ಎನೂ ಆಗೊಲ್ಲವಂತೆ... ಇವತ್ತಿನಿಂದಲೇ ಅವರ ಅನುಯಾಯಿಯಾಗಿ...") ಅಂತ ಮತ್ತೋರ್ವರ ಪುಕ್ಕಟೆ ಸಲಹೆ. ಈ ಕಲ್ಕಿ ಭಗವಾನ್‌ನ ಮಾಯೆಯ ಪ್ರಭಾವದ ಕುರಿತು ಈ ಮೊದಲೇ ಲೇಖನವೊಂದನ್ನು ಬರೆದಿದ್ದೆ. ಓದಿದ್ದರೆ ನಿಮಗೂ ಅನಿಸಬಹುದು ಈಗ "ಜೈ ಕಲ್ಕಿ ಭಗವಾನ್" ಎಂದು :) ಸಾವಿಗಂಜಿ ಬದುಕಲು ಹೆದರುವ ಮನುಷ್ಯರಿಗೆ ಏನೆನ್ನೋಣ? ಪ್ರಳಯಾಂತಕವೀ ಪ್ರಳಯದ ಆತಂಕ ಎಂದೆನಿಸಿತು!

ಪ್ರಳಯ ಅನ್ನೋದು ಎಂದೋ ಮುಂದಾಗುವಂತದ್ದಲ್ಲ. ಅದು ಆಗದೆಯೂ ಇರಬಹುದು. ಆಗಲೂ ಬಹುದು. ಆದಿ ಇದ್ದ ಮೇಲೆ ಅಂತ್ಯ ಇದ್ದೇ ಇದೆ ಎಂದು ನಂಬುವವಳು ನಾನು. ಆದರೆ ಆ ಅಂತ್ಯ ದಿಢೀರ್ ಎಂದು... ಇಂಥದ್ದೇ ದಿನವೆಂದು ಹೇಳಿದರೆ ಖಂಡಿತ ನಂಬಲಾಗದು. ಮುಂದಾಗುವ ದುರಂತದ ಸಣ್ಣ ಚಿತ್ರಣ ಇಂದೇ ಕೆಲವು ಕಡೆ ದೊರಕಿದೆ.. ದೊರಕುತ್ತಲೂ ಇದೆ... ಮುಂದೆಯೂ ಕಾಣಸಿಗುವುದು. ಮನುಷ್ಯ ತನ್ನ ಉಳಿವಿಗೆ ಹಾಗೂ ಅಳಿವಿಗೆ ತಾನೇ ಜವಾಬ್ದಾರ ಎಂದು ಮೊದಲು ತಿಳಿಯಬೇಕು. ಪ್ರಕೃತಿಯೊಡನೆ ಚೆಲ್ಲಾಟ ಪ್ರಾಣ ಸಂಕಟ ಎನ್ನು ಸತ್ಯ ಮನದಟ್ಟಾದರೆ ಇನ್ನೂ ಸ್ವಲ್ಪ ಕಾಲ ಈ ಕಲಿಯುಗ ಬಾಳಿಕೆಗೆ ಬರಬಹುದು. ಹುಟ್ಟು ಹೇಗೆ ಅನಿಶ್ಚಿತವೋ ಸಾವೂ ಹಾಗೆಯೇ... ಯಾರ ಸಾವನ್ನೂ ಯಾರೂ ಮೊದಲೇ ನಿಶ್ಚಯ ಮಾಡಲಾರರು. ಅದನ್ನು ಊಹಿಸಬಹುದಷ್ಟೇ! ಊಹೆ ಯಾವತ್ತೂ ಸತ್ಯವಲ್ಲ. ಅದಕ್ಕೆ ಅದರದ್ದೇ ಆದ ಅಸ್ತಿತ್ವವೂ ಇಲ್ಲ! ಪ್ರಳಯವೇ ಆಗಿರಲಿ..ಇಲ್ಲಾ ಇನ್ನಾವುದೇ ವಿಷಯವಾಗಿರಲಿ.. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೇ.. ಕೇವಲ ಕಪೋ ಕಲ್ಪಿತ ಸುದ್ದಿಯನ್ನು ನಂಬುವುದರ ಮೂಲಕ ನಾವು ನಮ್ಮ ಇಂದಿನ ಬಾಳ್ವೆಯನ್ನು ಮಾತ್ರ ನಾಶ ಮಾಡಿಕೊಳ್ಳುತ್ತೇವೆ. ಇದು ಮಾತ್ರ ಸತ್ಯ.

- ತೇಜಸ್ವಿನಿ ಹೆಗಡೆ.

ಗುರುವಾರ ೨೨ ಅಕ್ಟೋಬರ್ ೨೦೦೯

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ"

ನಾ ಮೆಚ್ಚಿದ ಕೃತಿ(ಒಳಗೊಂದು ಕಿರುನೋಟ)-೩

"ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" - ಹೀಗೊಂದು ಎಚ್ಚರಿಕೆಯ ಜೊತೆಗೆ ಅನ್ಯಾಯ ಎಲ್ಲೇ ಆಗಲಿ ಅದನ್ನು ಹಿಮ್ಮೆಟ್ಟಿಸಲು ಸಂಘಟಿತ ಪ್ರತಿಭಟನೆಯೇ ಸರಿಯಾದ ಮದ್ದು ಎನ್ನುವ ಸುಂದರ ಸಂದೇಶವನ್ನೂ ನೀಡುವ ಅಪರೂಪದ ಕಾದಂಬರಿ "ಯಾದ್ ವಶೇಮ್". ಇತ್ತೀಚಿಗೆ ನಾನು ಓದಿದ ಕಾದಂಬರಿಗಳಲ್ಲೇ ಬಹು ಇಷ್ಟಪಟ್ಟ, ಸತ್ಯಕ್ಕೆ ಬಲು ಹತ್ತಿರವಾದ ಈ ಕೃತಿಯನ್ನು ಬರೆದವರು ಪ್ರಸಿದ್ಧ ಲೇಖಕಿ "ನೇಮಿಚಂದ್ರ".


೧೯೪೩ರ ಸುಮಾರಿಗೆ ಯುರೋಪಿನಿಂದ "ಹಿಟ್ಲರ್"ನ ಪಾಶವೀ ಹಿಡಿತದಿಂದ ಹೇಗೋ ಪಾರಾಗಿ ಶಾಂತಿದೂತನಾಗಿದ್ದ ಬಾಪೂಜಿಯ ನಾಡಿಗೆ ಓಡಿ ಬಂದ ಹ್ಯಾನಾಳ ಬದುಕಿನ ಕಥೆಯಿದು. ಆದರೆ ಮೇಲ್ನೋಟಕ್ಕೆ ಹಾಗೆನಿಸಿದರೂ ಇದು ಪ್ರತಿಯೊಬ್ಬನ ಬದುಕನ್ನೇ ಬಗೆದು ನೋಡುವ, ಆತನ ಎದೆಯಾಳದೊಳಗೆ ಬೇರೂರಿದ ದ್ವೇಷವನ್ನೇ ಅಲುಗಾಡಿಸುವ, ಪ್ರೀತಿಯ, ಶಾಂತಿಯ ಹೊಸ ಬೀಜ ಬಿತ್ತುವ...ಒಟ್ಟಿನಲ್ಲಿ ಬದುಕನ್ನು ಪ್ರೀತಿಸುವ ಹಾಗೆ ಪ್ರೀತಿಸಲು ಕಲಿಸುವ ಸುಂದರ ಕಥೆಯಿದು. ಇದರಲ್ಲಿ ಅಸಹನೀಯ ನೋವಿದೆ, ಯಾತನೆಯಿದೆ, ಪಾಪಪ್ರಜ್ಞೆಯಿದೆ, ಆಕ್ರೋಶವಿದೆ, ತಿರಸ್ಕಾರವಿದೆ, ಕೊನೆಯಿಲ್ಲದ ಪ್ರಶ್ನೆಗಳಿವೆ, ಸಿಕ್ಕು ಸಿಕ್ಕಾದ ಉತ್ತರಗಳಿವೆ...ಆದರೆ ಜೊತೆಜೊತೆಗೇ ಎಲ್ಲವುದಕ್ಕೂ ಕಾರಣ ನಾವೇ ಅಂದರೆ ಮನುಷ್ಯರೇ ಎನ್ನುವ ಸಮರ್ಪಕ ಉತ್ತರವೂ ಇದೆ.

ಅಂದು ನಾಜಿಗಳಿಂದಾಗುತ್ತಿದ್ದ ಅತ್ಯಾಚಾರಗಳಿಂದ ಮುಕ್ತಿಗೊಳಿಸಿರೆಂದು ಜಗತ್ತನ್ನೇ ಮೊರೆಯಿಟ್ಟಿದ್ದರು ಯಹೂದಿಯರು. ಅದರಲ್ಲೂ ವಿಶೇಷವಾಗಿ ಬ್ರಿಟಿಷರ ಸಹಾಯವನ್ನು ನಿರೀಕ್ಷಿಸಿದ್ದರೆಂದು ಈ ಪುಸ್ತಕವು ಹೇಳುತ್ತದೆ. ಆದರೆ ಸಕಾಲದಲ್ಲಿ ನೆರವು ಸಿಗದೇ, ಹಿಟ್ಲರನ ನರಮೇಧ ಕ್ಯಾಂಪ್‌ಗೆ ಸುಮಾರು ಆರು ಮಿಲಿಯ ಅಮಾಯಕ ಯಹೂದಿಯರು ಬಲಿಯಾಗುತ್ತಾರೆ. ಒಂದೇ ಉಸುರಿಗೆ ಅವರೆಲ್ಲರ ಪ್ರಾಣ ಹೋಗಿರುವುದಿಲ್ಲ. ಕ್ರಮೇಣ, ಹಂತ ಹಂತವಾಗಿ, ನಿಧಾನವಾಗಿ, ಅತ್ಯಂತ ಕ್ರೂರ ರೀತಿಯಲ್ಲಿ ಬದುಕನ್ನು ಇಷ್ಟಿಷ್ಟೇ ಎಂಬಂತೆ ಕಸಿದುಕೊಂಡಿದ್ದ ಆತ!! ಅಂತಹ ಒಂದು ದುರ್ದಿನಗಳಲ್ಲಿ ತಾಯಿ, ಅಕ್ಕ ಹಾಗೂ ತಮ್ಮನನ್ನು ನಾಜಿಗಳು ತನ್ನ ಕಣ್ಮುಂದೇ ಎಳೆದೊಯ್ದ ಕರಾಳ ನೆನಪನ್ನೇ ಹೊತ್ತು ಅಸಹಾಯಕತೆ ಬೆರೆತ ಕ್ರೋಧ, ನೋವು, ಅನಾಥಪ್ರಜ್ಞೆಯೊಂದಿಗೆ ತನ್ನ ತಂದೆಯೊಡಗೂಡಿ, ಅಹಿಂಸೆಯಿಂದ ಮಾತ್ರ ವಿಮೋಚನೆ ಸಾಧ್ಯವೆಂದು ಸಾರುತ್ತಿದ್ದ ಗಾಂಧಿಯ ನಾಡಿಗೆ ಬಂದವಳು ಹ್ಯಾನಾ. ಬ್ರಿಟಿಷರ ನೆರವನ್ನು ಆಶಿಸಿ ಸಿಗದೇ ಅವರಿಂದಲೇ ತುಳಿತಕ್ಕೊಳಗಾಗಿ ಹೋರಾಡುತ್ತಿದ್ದ ಭಾರತ ಅವಳಿಗೆ ಹೊಸ ಬದುಕನ್ನೇ ನೀಡಿತು. ಇಲ್ಲಿನ ಸಂಸ್ಕೃತಿ, ನೆಲ, ಜನ ಎಲ್ಲವೂ ಅವಳ ಕತ್ತಲು ತುಂಬಿದ್ದ ಮನಸಿಗೆ, ಬಾಳಿಗೆ ಬೆಳಕಾಗಿ ಬಂದವು. ತನ್ನ ಗತಕಾಲದ ನೆನಪಿನ ಕಡೆಯ ಕೊಂಡಿಯಾಗಿದ್ದ ತಂದೆಯನ್ನೂ ಕಳೆದುಕೊಂಡ ಮೇಲೆ ಹ್ಯಾನಾ "ಅನಿತಾ" ಆದಳು. ಆಶ್ರಯವಿತ್ತು ಆದರ ತೋರಿದ ಮನೆಯವರ ಮಗನನ್ನೇ ಮದುವೆ ಆಗಿ ತಾನು ಕನಸಲ್ಲೂ ಆಶಿಸದ ಸುಂದರ ಸುಭದ್ರ ಬದುಕನ್ನು ಪಡೆದಳು. ಅನಿತಾ ಎಂದು ಅನಿಸಿಕೊಂಡ ಮೇಲೂ ಹ್ಯಾನಾಳಾಗಿಯೇ ಅವಳು ಬದುಕಲು ಸಾಧ್ಯವಾಗಿದ್ದು ಆಕೆ ಇಲ್ಲಿ ಅಂದರೆ ಈ ನಾಡಿನಲ್ಲಿದ್ದುದರಿಂದ ಮಾತ್ರ ಎಂಬುದನ್ನು ಲೇಖಕಿ ಹಲವಾರು ಉದಾಹರಣೆಗಳ ಮೂಲಕ, ಘಟನಾವಳಿಗಳ ಮೂಲಕ ಮನಗಾಣಿಸಿದ್ದಾರೆ. ಅವೆಲ್ಲಾ ಬಲು ಸುಂದರವಾಗಿವೆ. ಮಾಸದ ನೆನಪನ್ನು ನಮ್ಮೊಳಗೂ ಮೂಡಿಸುತ್ತವೆ.

ಲೇಖಕಿಯೇ ಒಂದು ಕಡೆ ಹೇಳಿದಂತೆ, "ಮನುಷ್ಯನನ್ನು ಧರ್ಮದ ಹೆಸರಿನಲ್ಲಿ ಒಡೆಯುವ ಚರಿತ್ರೆಗಿಂತ ಒಂದುಗೂಡಿಸುವ ಚರಿತ್ರೆಯೇ ಮಹತ್ವದ್ದು..." - ಈ ಒಂದು ವಾಕ್ಯ ಅದೆಷ್ಟು ನಿತ್ಯ ಸತ್ಯ ಎನ್ನುವುದು ಈ ಕಾದಂಬರಿಯನ್ನೋದಿದಮೇಲೆ ಸರಿಯಾಗಿ ಮನದಟ್ಟಾಗುತ್ತದೆ. ಯಾವುದೋ ಪೂರ್ವಾಗ್ರಹಕ್ಕೀಡಾಗಿ, ಕೇವಲ ನೆಪವನ್ನು ಮಾತ್ರ ದ್ವೇಷಕ್ಕೆ ಕಾರಣವನ್ನಾಗಿಸಿಕೊಂಡು ಅಮಾಯಕ ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರ್ ಹಾಗೂ ಆತನ ಸಂಗಡಿಗರಾದರೂ ನೆಮ್ಮದಿಯ ಬದುಕು ಕಂಡಿರಬಹುದೇ? ಖಂಡಿತ ಇಲ್ಲವೆನ್ನುತ್ತದೆ ಮನಸ್ಸು. "ಬದುಕಬಹುದು ಹಂಚಿಕೊಂಡು ಬದುಕಬಹುದೇ ಕಿತ್ತುಕೊಂಡು?" ಎಂದು ಹ್ಯಾನಾಳ ಮೂಲಕ ಪ್ರಶ್ನಿಸುವ ಲೇಖಕಿಯ ಈ ಒಂದು ಪ್ರಶ್ನೆಗೆ ಉತ್ತರವೂ ನಮ್ಮೊಳಗೇ ಅಡಗಿದೆ. ಹಿಟ್ಲರ್ ಅವನ ಜನಾಂಗಕ್ಕೆ ಸ್ವಾತಂತ್ರ್ಯ ಪಡೆದುಕೊಂಡದ್ದು ಇತರರ ಸ್ವಾತಂತ್ರ್ಯವನ್ನು ಹರಣಮಾಡುವುದರ ಮೂಲಕ. ಆದರೆ ನಾವು ಬಹು ಭಾಗ್ಯಶಾಲಿಗಳು. ನಮ್ಮ ಸ್ವಾತಂತ್ರ್ಯವನ್ನು ಕಸಿದಾಳುತ್ತಿದ್ದ ಬ್ರಿಟಿಷರನ್ನು ಅಹಿಂಸಾ ಮಾರ್ಗವನ್ನೇ ಪ್ರಮುಖವಾಗಿ ಅನುಸರಿಸಿ ಹೊರದಬ್ಬಿದೆವು. "ನಮ್ಮ ಸ್ವಾತಂತ್ರ್ಯ ಯಾರದೋ ಸ್ವಾತಂತ್ರ್ಯದ ಹರಣದ ಮೇಲೆ ನಿಂತಿಲ್ಲ" ಎನ್ನುವ ಸಮಾಧಾನವಾದರೂ ನಮ್ಮೊಂದಿಗಿದೆ.

ಬಿಟ್ಟು ಬಂದ ಆ ನೆಲದವಳಾಗಿಯೂ ಬಾಳದೇ, ಈಗಿರುವ, ಆಶ್ರಯಿಸಿದ ಈ ನೆಲವನ್ನೂ ಸೇರದೇ ಅನಾಥಪ್ರಜ್ಞೆಯಿಂದ ಬಳಲುವ ಅದೆಷ್ಟು ಹ್ಯಾನಾರನ್ನು ನಾವು ಅಫಘಾನಿಸ್ತಾನ, ಪಾಕಿಸ್ತಾನ, ಅಸ್ಸಾಂ, ಬಾಂಗ್ಲಾದೇಶ ಇತ್ಯಾದಿ ನಿರಾಶ್ರಿತರಲ್ಲಿ ಕಂಡಿಲ್ಲ?! ಇವರೆಲ್ಲಾ ಯಾರದೋ ಅಟ್ಟಹಾಸಕ್ಕೆ, ಅಂಹಕಾರಕ್ಕೆ, ಮೂರ್ಖತನದ ಪರಮಾವಧಿಗೆ ಬಲಿಯಾದವರು. ಏನೂ ತಪ್ಪನ್ನು ಮಾಡದೇ ತಮ್ಮವರಿಂದ, ಮನೆ, ಮಠದಿಂದ ವಂಚಿತರಾದವರು. ಅಂದು ಹಿಟ್ಲರ್‌ನ ಹುಚ್ಚುತನದ ಪರಮಾವಧಿಯನ್ನು ಇಡೀ ಜಗತ್ತೇ ನಿಂತು ನೋಡಿತ್ತು ನಿಜ.. ಆದರೆ ಇಂದು ಅದೆಷ್ಟೋ ಹಿಟ್ಲರ್‌ಗಳು ಅಸಂಖ್ಯಾತ ಅಮಾಯಕರ ನರವಧೆಯನ್ನು ಬಹು ಸುಲಭವಾಗಿ ಯಾವುದೇ ನಾಜಿ ಕ್ಯಾಂಪಿನ ಸಹಾಯವಿಲ್ಲದೆಯೇ ಮಾಡುತ್ತಿದ್ದಾರೆ.. ನಮ್ಮ ಕಣ್ಮುಂದೆಯೇ. ಇಂದೂ ನಾವು ಅಂದರೆ ಜಗತ್ತು ದೂರದಲ್ಲೆಲ್ಲೋ ನಡೆಯುವ ಈ ನರಮೇಧವನ್ನು ನಿಂತು ನೋಡುತ್ತಲೇ ಇದ್ದೇವೆ.!!! "ನಿಂತು ನೋಡುವ ಜನರೇ ನಿಮ್ಮ ಸರದಿ ದೂರವಿಲ್ಲ" ಎಂದು ಹ್ಯಾನಾ ಎಚ್ಚರಿಸುವ ಈ ಮಾತು ಕಾದಂಬರಿಯನ್ನೋದಿದ ಮೇಲೆಯೂ ಸದಾ ತಲೆಯೊಳಗೇ ಗುಂಯ್ಯ್ ಎನ್ನುತ್ತಿರುತ್ತದೆ. ಎಚ್ಚರಿಕೆಯ ಗಂಟೆಯನ್ನು ಅರಿತು ನಡೆದರೆ ನಮ್ಮ ಸರದಿಯನ್ನಾದರೂ ನಾವು ತಪ್ಪಿಸಿಕೊಳ್ಳಬಹುದೇನೋ ಎಂದೆನಿಸುತ್ತದೆ.

"ಟ್ರಾನ್ಸ್‌ಯುರೇನಿಕ್ಸ್" ಕಂಡು ಹಿಡಿದ ಜಗತ್ ಪ್ರಸಿದ್ಧ ಯಹೂದಿ ವಿಜ್ಞಾನಿ ಲೀ ಮೆಟ್ನರ್. ಈಕೆ ಕೂಡಾ ಹಿಟ್ಲರ್‌ನ ಹಿಡಿತದಿಂದ ಪಾರಾಗಲು ಪರದಾಡಿದವಳು. ಅಂದು ಯಹೂದಿಗಳಲ್ಲಿ ಕೆಲವರು ತಲೆಮರೆಸಿಕೊಂಡು ತಮ್ಮ ವ್ಯಕ್ತಿತ್ವವನ್ನೇ ನಶಿಸಿಕೊಂಡು ಬಾಳಿದರೆ ಅಸಂಖ್ಯಾತರು ಆತನ ಕ್ರೂರತ್ವಕ್ಕೆ, ಪಾಶವೀ ಕೃತ್ಯಕ್ಕೆ ಗುರಿಯಾಗಿ, ನಾಜಿ ಕ್ಯಾಂಪ್‌ಗಳಲ್ಲಿ ಸತತ ಅತ್ಯಾಚಾರಕ್ಕೆ ಒಳಗಾಗುತ್ತಾ ಬದುಕಿ ಬದುಕಿ ಸತ್ತವರು. ಎಷ್ಟು ಅಮಾನವೀಯವಾಗಿ ಪಶುವಂತೆ, ಮನುಷ್ಯರೆಂದೂ ಪರಿಗಣಿಸದೇ ಆತ ಯಹೂದಿಗಳನ್ನು ನಡೆಸಿಕೊಂಡನೆಂದು ಹ್ಯಾನಾಳ ಅಕ್ಕ ರೆಬೆಕ್ಕಳ ಕಥೆಯ ಮೂಲಕ ನಮಗೆ ತೋರಿಸುತ್ತಾರೆ ನೇಮಿಚಂದ್ರ. ಓದುವುದೇ ಅಷ್ಟು ಕಷ್ಟವೆನಿಸುವಾಗ ಅದು ಹೇಗೆ ಆ ಮುಗ್ಧರು ಸಹಿಸಿದರೋ!!!? ಆ ಭಗವಂತನ ಬಿಟ್ಟರೆ ಹಿಟ್ಲರ್ ಒಬ್ಬನಿಗೆ ತಿಳಿದರಬಹುದೇನೋ!!

ಹಿಂದೆ ಆಗಿದ್ದ ಅನ್ಯಾಯವನ್ನು ಮರೆತೋ ಇಲ್ಲಾ ಅಂದು ಆಗಿದ್ದ ಅನ್ಯಾಯದ ಸೇಡಿಗೋ ಎಂಬಂತೆ ಇಂದು ಯಹೂದಿಗಳ ರಾಷ್ಟ್ರ ಇಸ್ರೇಲ್ ವರ್ತಿಸುತ್ತಿರುವುದು ಈ ಕಾದಂಬರಿಯಲ್ಲಿ ನಿಚ್ಚಳವಾಗಿ ಕಾಣುತ್ತದೆ. ಒಡೆದು ಆಳುವ ನೀತಿಯನ್ನು ಅನುಸರಿಸುವ ಬ್ರಿಟಿಷರು, ೧೯೪೮ರಲ್ಲಿ ಯಹೂದಿಗಳಿಗಾಗಿಯೇ, ಅಂದು ಮುಸಲ್ಮಾನರು ಆಳುತ್ತಿದ್ದ ಪ್ಯಾಲಿಸ್ಟೈನ್ ಅನ್ನು ನೀಡುತ್ತಾರೆ. ಅಲ್ಲಿದ್ದ ಮುಸಲ್ಮಾನರನ್ನು ಹೊರಗಟ್ಟುವ ಯಹೂದಿಗಳು ಇಸ್ರೇಲ್ ಅನ್ನು ಸ್ಥಾಪಿಸುತ್ತಾರೆ. ಅಳಿದುಳಿದ ಪ್ಯಾಲಿಸ್ಟೈನ್‌ರು ತುಂಡು ನೆಲದಲ್ಲಿ ಅವರದೇ ರಾಷ್ಟ್ರದಿಂದ ಬೇರಾಗಿ ಜೀವಿಸುತ್ತಾರೆ. ಎಂತಹ ವಿಪರ್ಯಾಸ!!! ಹಿಂದೆ ಜರ್ಮನಿಯಲ್ಲಿ ನಡೆದ ಚರಿತ್ರೆಯನ್ನೇ ಮರೆತು ಇಂದು ಹೊಸ ಇತಿಹಾಸವನ್ನು ಬರೆದವರು ಇದೇ ಯಹೂದಿಗಳು. ಆದರೆ ಇದಕ್ಕೆಲ್ಲಾ ಕಾರಣವೇನು? ಯಾಕೆ ಇತಿಹಾಸ ಮತ್ತೆ ಮತ್ತೆ ಪುನರಾವರ್ತಿಸುತ್ತದೆ? "ಇತಿಹಾಸವನ್ನು ಮರೆತವರು ಮತ್ತೆ ಚರಿತ್ರೆಯ ಪುನಾರವರ್ತನೆಗೆ ಕಾರಣರಾಗುತ್ತಾರೆ.. ನೆನಪಿರಲಿ.. ನೆನಪಿರಲಿ.." ಎಂದು ಇಸ್ರೇಲಿನ "ಯಾದ್ ವಶೇಮ್" ಮ್ಯೂಸಿಯಂನ ಗರುಡಗಂಬದಲ್ಲಿ ಕೆತ್ತಿದ ಈ ಸಾಲು ಎಷ್ಟು ಪರಮಸತ್ಯವೆಂದು ಅನಿಸುತ್ತದೆ.

ತಮ್ಮ ಇತಿಹಾಸವನ್ನೇ ಮರೆತು ಇಸ್ರೇಲ್ ಈಗ ಸದಾ ಕಾಲ ಕದನದಲ್ಲೇ ತೊಡಗಿದೆ. ಶಾಂತಿಗಾಗಿ ಪರಿತಪಿಸಿದ ಅದೇ ಜನ ಇಂದು ಪ್ರತಿ ನಿಮಿಷವೂ ಯುದ್ಧದ ಭೀತಿಯಲ್ಲಿ, ಅಶಾಂತಿಯ ನಡುವೆಯೇ ಜೀವಿಸುತ್ತಿದ್ದಾರೆ. ಒಂದು ಕಡೆ ಲೇಖಕಿ ಹ್ಯಾನಾಳ ಮೂಲಕ ಹೀಗೆ ಕೇಳುತ್ತಾರೆ.... "ತುಂಡು ನೆಲ ಗಾಜಾವನ್ನು ಪ್ಯಾಲಿಸ್ಟೈನ್‌ರಿಗೇ ಬಿಟ್ಟುಕೊಟ್ಟು ಇಡಿಯ ಇಸ್ರೇಲ್ ಅನ್ನು ಶಾಂತಿಯಿಂದ ಜೀವಿಸಲು ಬಿಡಬಹುದಲ್ಲಾ" ಎಂದು. ಇದು ಹೌದು..ನಿಜ... ಎಂದೆನಿಸಿದರೂ ನನ್ನ ಮನದೊಳಗೊಂದು ಪ್ರಶ್ನೆ ಮೂಡುತ್ತದೆ. ಇಂದು ನಾವೂ ಅದೇ ಕೆಲಸವನ್ನು ಮಾಡಿಯೂ ಏಕೆ ಶಾಂತಿಯಿಂದ ಯಾವುದೇ ಭಯೋತ್ಪಾದನೆಯ ಭೀತಿಯಿಂದ ಜೀವಿಸುತ್ತಿಲ್ಲ? ಗಾಂಧಿಜಿ ಅಂದು ತೆಗೆದುಕೊಂಡ ನಿರ್ಧಾರ ಸರಿಯೆಂದೆಣಿಸಿದರೆ, ಪಾಕಿಸ್ತಾನದ ಹುಟ್ಟು ಚಿರ ಶಾಂತಿ, ಸ್ನೇಹದ ಬಾಂಧವ್ಯಕ್ಕಾಗಿಯೇ ಇತ್ತೆಂದು ಸಮರ್ಥಿಸಿಕೊಂಡರೆ, ಇಂದಿನ ಭಾರತದ/ಭಾರತೀಯರ ಸ್ಥಿತಿಯೇ ಪರಿಹಾಸಕ್ಕೆ ಒಳಗಾಗದೇ? ಕುಟಿಲ ನೀತಿಯ ಇಂಗ್ಲೀಷರೇನೋ ಇಬ್ಭಾಗ ಮಾಡಿದರು. ಸೌಹಾರ್ದತೆಯ ಸಂಕೇತವಾಗಿ ಭಾರತವೂ ಸುಮ್ಮನಾಯಿತು. ಆದರೆ ಅದೇ ತುಂಡು ನೆಲ ಪಡೆದುಕೊಂಡ ಪಾಕಿಸ್ತಾನ ಮಾಡಿದ್ದೇನು? ಮಾಡುತ್ತಿರುವುದೇನು? ಇಸ್ರೇಲ್ ಕೂಡಾ ಈ ಭೀತಿಯಿಂದಲೇ ಎಲ್ಲವನ್ನು ತನ್ನೊಳಗೇ ಎಳೆದುಕೊಳ್ಳಲು ಹೊರಟಿರಬಾರದೇಕೆ? ಭವಿಷ್ಯದ ಚಿಂತೆ ಭೂತದ ಕರಿ ನೆನಪನ್ನೇ ಅಳಿಸಿಹಾಕಿರ ಬಾರದೇಕೆ? "ಕಾಲದ ಕಡಲಲಿ ನೆನಪಿನ ದೋಣಿಯ ತೇಲಿಸಿದವರಿಲ್ಲ..." ಅಲ್ಲವೇ?

ಆದರೆ ಹ್ಯಾನಾಳ ಒಂದು ಮಾತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. "ಯುದ್ಧದಲ್ಲಿ ಸೋತವರು ಗೆದ್ದವರು ಎಂಬವರಿಲ್ಲ. ಇಲ್ಲಿ ಗೆದ್ದವರೂ ಸೋಲುತ್ತಾರೆ." ನಿಜ. ಪ್ರೀತಿ, ಸ್ನೇಹವೂ ಇದೇ ತರಹವೇ. ಇಲ್ಲಿಯೂ ಸೋಲು ಗೆಲುವೆಂಬುದಿಲ್ಲ. ಆದರೆ ಇಲ್ಲಿ ಮಾತ್ರ ಸೋತವರೂ ಗೆದ್ದಿರುತ್ತಾರೆ. ಸೋತರೂ ಗೆಲ್ಲುವ ಈ ಪ್ರೀತಿಯನ್ನು ಹೊರಹಾಕಿ ಗೆದ್ದರೂ ಸೋಲುವ ಯುದ್ಧವನ್ನು, ದ್ವೇಷವನ್ನು ಮನುಷ್ಯ ಏಕೆ ಅಪ್ಪಿಕೊಳ್ಳುತ್ತಾನೋ?

ಯುದ್ಧ ಹುಟ್ಟುವುದು ಕೆಲವು ನರರೂಪಿ ರಾಕ್ಷಸರ ಹೃದಯದಲ್ಲಿ ಎನ್ನುತ್ತಾಳೆ ಹ್ಯಾನಾ.. ಒಪ್ಪುವೆ. ಆದರೆ ನನ್ನ ಪ್ರಕಾರ ಇದಕ್ಕೆ ಪ್ರಮುಖ ಕಾರಣ ಮೂರು. ಅಹಂ, ಸ್ವಾರ್ಥದ ಪರಮಾವಧಿ ಹಾಗೂ ಕೊಳಕು ರಾಜಕೀಯ. ಹಿಟ್ಲರ್‌ನ ಹುಚ್ಚಿಗೂ ಆತನ ಪಾಶವೀ ಕೃತ್ಯಕ್ಕೂ ಇದೇ ಕಾರಣವೆನ್ನುತ್ತದೆ ಚರಿತ್ರೆ ಹಾಗೂ ಈ ಕಾದಂಬರಿ. ಜಗತ್ತು, ಆ ದೇಶದ ಜನರೂ, ಅಮಾಯಕ ಯಹೂದಿಯರ ಬಲಿಗೆ ಮೂಕ ಪ್ರೇಕ್ಷಕರಾಗಿರಲೂ ಈ "ಸ್ವಯಂ ಲಾಭ"ವೇ ಕಾರಣವೆನ್ನುತ್ತಾಳೆ ಹ್ಯಾನಾ. ಅದು ನಿಜ ಕೂಡ. ಶ್ರೀಮಂತ ಯಹೂದಿಗಳ ಪರ್ಯಾವಸಾನದಿಂದ ಅವರ ಹಣ, ಆಸ್ತಿ ಎಲ್ಲಾ ಸಿಗುವುದು ಯಾರಿಗೆ ಹೇಳಿ? ಈ ಒಂದು ಲಾಭಕೋರತನವೇ ಬಹುಶಃ ಅಂದು ಅಲ್ಲಿಯ ಆರ್ಯ ಜನರು ನಿಂತು ನೋಡಲು ಸಾಧ್ಯವಾಗಿದ್ದು. ತಮ್ಮ ಬುಡಕ್ಕೆ ಬಂದಾಗ, ಜಗತ್ತನ್ನೇ ಆಳುವ ಭ್ರಮೆಗೆ ಹಿಟ್ಲರ್ ಒಳಗಾದಾಗ ಅಮೇರಿಕಾ, ಬ್ರಿಟನ್ ಮುಂತಾದ ಬಲಿಷ್ಠರು ಎದುರು ನಿಂತಿದ್ದು. ಈ ಸರದಿಗಾಗಿ ಕಾಯುವ ಅಗತ್ಯವಿತ್ತೆ? ಆರು ಮಿಲಿಯ ಯಹೂದಿಗಳ ಅಂತ್ಯಕ್ಕೆ ತಾಳ್ಮೆಯ ಲೇಪನ ಬೇಕಿತ್ತೆ? ನರರೂಪಿ ರಾಕ್ಷಸರ ಅಟ್ಟಹಾಸಕ್ಕೆ ಮನುಷ್ಯತ್ವವನ್ನೇ ಕಳೆದುಕೊಂಡು ಲಾಭಕ್ಕಾಗಿ ಸುಮ್ಮನಿದ್ದ ಅಂದಿನ ಜರ್ಮನರನ್ನು ಇತಿಹಾಸ ಕ್ಷಮಿಸಿದರೂ ಅವರ ಅಂತರಾತ್ಮ ಕ್ಷಮಿಸಿರಬಹುದೇ? ಊಹೂಂ ಇಂತಹ ಪ್ರಶ್ನೆಗಳಿಗೆ ಉತ್ತರ ನಾವೇ ಕಂಡು ಹಿಡಿದುಕೊಳ್ಳಬೇಕಿದೆ.

ಮುಂದೆ ಎಂದೂ ಹಿಟ್ಲರ್ ನಮ್ಮೊಳಗೆ, ನಮ್ಮ ನಡುವೆ, ನಮ್ಮಿಂದ ದೂರವೇ ಆಗಿರಲಿ ಹುಟ್ಟದಿರುವಂತೆ ನೋಡಬೇಕು. ಆತನ ದಮನಕ್ಕೆ ನಮ್ಮ ಎದೆಯಗೂಡನ್ನೆ ಬಗೆದು ಅದರೊಳಗೆ ಬಿತ್ತಿರುವ ನೆಪಮಾತ್ರದ ದ್ವೇಷವನ್ನೇ ಕೆಡವಿಹಾಕಬೇಕು. ಹೊಸ "ಮಾಯಾದೀಪವನ್ನು" ಬೆಳಗಿದರೆ ಮಾತ್ರ ಸ್ವಾರ್ಥದ ಕತ್ತಲೆ ನಮ್ಮ ಮನದ ಮೂಲೆಯಿಂದಲೂ ಮರೆಯಾಗಬಹುದು. "ಇತಿಹಾಸ ತಿಳಿದರಬೇಕು ಅಷ್ಟೇ. ಆದರೆ ಅದೇ ಆದರ್ಶವಾಗಿರಬಾರದು" ಎಂಬ ಸುಂದರ ಸಂದೇಶವನ್ನು ನೀಡುವ ಈ ಕಾದಂಬರಿ ಇಸ್ಲಾಂ, ಯಹೂದಿ, ಕ್ರಿಶ್ಚನ್ - ಈ ಮೂರು ಧರ್ಮಗಳೂ ಹೇಗೆ ಒಂದು ಜೆರೂಸಲೇಂ‌ನೊಳಗೇ ಬೆಸೆದಿವೆ.. ಯಾವ ರೀತಿ ಈ ಮೂರು ಧರ್ಮಗಳು ಒಂದೇ ಹಳೆಯ ಒಡಂಬಡಿಕೆಯಡಿ ನೆಲೆನಿಂತಿವೆ ಎನ್ನು ಸತ್ಯವನ್ನೂ ಕಾಣಿಸುತ್ತದೆ. ಈವರೆಗೆ ನಾವು ಓದಿದರದ, ತಿಳಿದಿರದ ಹಲವಾರು ವಿಷಯಗಳ ಕುರಿತು, ನಿಷ್ಪಕ್ಷ್ಯಪಾತವಾಗಿ ಹೊಸ ಬೆಳಕನ್ನು, ಆಯಾಮವನ್ನು ನೀಡಿದ್ದಾರೆ ಲೇಖಕಿ.

"ನಮ್ಮ ನಡುವೆ ಎಲ್ಲಿ ಕೂಡ ಹುಟ್ಟಿಬಿಡಬಲ್ಲ, ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್‌ನನ್ನು ತಡೆಹಿಡಿವ ಹೊಣೆ ನಮ್ಮದು" ಎನ್ನುವ ಸುಂದರ, ಅಪೂರ್ವ ಸಂದೇಶವನ್ನು ನೀಡುವ "ಯಾದ್ ವಶೇಮ್" ಎಲ್ಲರೂ ಓದಬೇಕಾದ, ಸಂಗ್ರಹಕ್ಕೆ ಯೋಗ್ಯವಾದ ಅತ್ಯುತ್ತಮ ಪುಸ್ತಕ ಎನ್ನಲು ಯಾವುದೇ ಸಂಶಯವಿಲ್ಲ.

- ತೇಜಸ್ವಿನಿ ಹೆಗಡೆ